ದಾರಿತಪ್ಪಿ ಬಾವಿಗೆ ಬಿದ್ದು ಒಳಗೇ 3 ದಿನ ಕಳೆದರೂ ಬದುಕಿ ಬಂದ 80 ರ ವೃದ್ಧ | ಹಿರಿ ಜೀವದ ಜೀವನೋತ್ಸಾಹಕ್ಕೆ ಹಿರಿಹಿರಿ ಹಿಗ್ಗಿದ ಗ್ರಾಮಸ್ಥರು

80 ವರ್ಷದ ನಾರಾಯಣ ಎಂಬುವವರು ತಮ್ಮ ಸಮೀಪದ ಗ್ರಾಮವೊಂದರಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಹಿಂದಿರುಗುವಾಗ ದಾರಿತಪ್ಪಿ ಜಮೀನಿನಲ್ಲಿದ್ದ ಪಾಳುಬಾವಿಗೆ ಆಕಸ್ಮಿಕವಾಗಿ ಬಿದ್ದು ಮೂರು ದಿನಗಳ ಬಳಿಕ ರಕ್ಷಣೆಗೆ ಒಳಗಾದ ಘಟನೆ ನಡೆದಿದೆ.

ಬಾವಿಯಲ್ಲಿ ಬಿದ್ದಿದ್ದ ನಾರಾಯಣ ಮೂರು ದಿನಗಳ ಕಾಲ ನೆರವಿಗಾಗಿ ಕೂಗಾಡಿ, ಕಣ್ಣೀರು ಸುರಿಸಿದರೂ, ಯಾರೊಬ್ಬರಿಗೂ ಅವರ ಸುಳಿವು ಸಿಗಲಿಲ್ಲ. ಮೂರು ದಿನಗಳ ಕಾಲವೂ ಊಟ ಇಲ್ಲದೆ ಹಿರಿಯ ಜೀವ ಸಾಕಷ್ಟು ನರಳಾಡಿದೆ. ಕೊನೆಗೂ ಅವರನ್ನು ರಕ್ಷಣೆ ಮಾಡಲಾಗಿದೆ.

ಈ ಘಟನೆ ತೆಲಂಗಾಣದ ಸಿದ್ದಿಪೇಟೆ ಎಂಬಲ್ಲಿ ನಡೆದಿದ್ದು, ಅನ್ನ ಆಹಾರವಿಲ್ಲದೆ ಮೂರು ದಿನಗಳು ಬಾವಿಯಲ್ಲಿದ್ದರೂ, ಮತ್ತೆ ಬದುಕಿ ಬರಬೇಕೆಂದು ಮನೋಸ್ಥೈರ್ಯ ತೋರಿ ತಾಳ್ಮೆಯಿಂದ ಕಾಯುತ್ತಿದ್ದ ಆ ಹಿರಿ ಜೀವದ ಜೀವನೋತ್ಸಾಹಕ್ಕೆ ಇವತ್ತು ಇಡೀ ತೆಲಂಗಾಣ ಸಲಾಂ ಹೊಡೆದಿದೆ.

ಆ ಜೀವದ ನರಳಾಟ ನೋಡಿ ದೇವರಿಗೂ ಮನಸ್ಸು ಕರಗಿತೇನೋ. ಜುಲೈ 1 ರಂದು ಅಂದರೆ ಘಟನೆ ನಡೆದ ಮೂರು ದಿನಗಳ ಬಳಿಕ ಪಾಳು ಬಾವಿಯ ಹತ್ತಿರ ಕೆಲಸ ಮಾಡುತ್ತಿದ್ದ ರೈತನಿಗೆ ನಾರಾಯಣ ಅವರು ಅಳುವ ಶಬ್ದ ಕೇಳಿದೆ. ತಕ್ಷಣ ಹೋಗಿ ನೋಡಿದ ರೈತ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಿರಿಯ ಜೀವವನ್ನು ರಕ್ಷಿಸಿದ್ದಾರೆ.

ಮೂರು ದಿನಗಳ ಕಾಲ ಊಟವಿಲ್ಲದೆ, ಬಾವಿಯ ಕೇವಲ ಒಂದು ಭಾಗದಲ್ಲಿದ್ದ ನೀರನ್ನು ಕುಡಿದುಕೊಂಡು ನಾರಾಯಣ ಬದುಕಿದ್ದರು. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸೇರಿ ಆ ಹಿರಿ ಜೀವವನ್ನು ರಕ್ಷಿಸಿದ್ದಾರೆ. ತುಂಬಾ ನಿತ್ರಾಣಗೊಂಡಿದ್ದ ನಾರಾಯಣರ ನಡುವಿಗೆ ಹಗ್ಗ ಕಟ್ಟಿ ಮೇಲಕ್ಕೆ ಎಳೆಯಲಾಯಿತು.

ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಅದೃಷ್ಟವಶಾತ್ ಹಿರಿಯ ಜೀವಕ್ಕೆ ಯಾವುದೇ ಗಾಯಗಳಾಗಿಲ್ಲ. ಆರೋಗ್ಯ ಸ್ಥಿರವಾಗಿದೆ. ಇದಕ್ಕೂ ಮೊದಲು ನಾರಾಯಣ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ನಾಪತ್ತೆ ಪ್ರಕರಣವನ್ನು ದಾಖಲಿಸಲಾಗಿತ್ತು. ನಾರಾಯಣ ರಕ್ಷಣೆ ಮಾಡಿದ್ದಕ್ಕೆ ಅವರ ಕುಟುಂಬ ಪೊಲೀಸರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಕಷ್ಟಗಳಿಗೆ ಹೆದರಿ ಆತ್ಮಹತ್ಯೆಯಂತಹ ಹೇಡಿ ಕೃತ್ಯ ಮಾಡುವ ಯುವ ಜನತೆ ಒಂದು ಕಡೆಯಾದರೆ, ಕೊನೆಯ ತನಕ ಭರವಸೆ ಕಳೆದುಕೊಳ್ಳದ ಹಿರಿ ಜೀವಗಳು ಇನ್ನೊಂದೆಡೆ ಯುವಕ-ಯುವತಿಯರಿಗೆ ಸ್ಫೂರ್ತಿ ನೀಡುತ್ತಲೇ ಬರುತ್ತಿವೆ ಎಂದಿದ್ದಾರೆ ಸ್ಥಳೀಯ ಮುಖಂಡರೊಬ್ಬರು.

Leave A Reply

Your email address will not be published.