ಮಂಗಳೂರು : ಬೀದಿನಾಯಿಗೆ ಗುಂಡು ಹೊಡೆದು ಕೊಲೆ, ವ್ಯಾಪಕ ಆಕ್ರೋಶ | ನಾಯಿಗೆ ಗುಂಡು ಹೊಡೆಯುವಷ್ಟು ಅಗ್ಗವಾಗಿದೆಯಾ ಪಿಸ್ತೂಲ್ – ಮದ್ದು ಗುಂಡುಗಳು ?!

ಮಂಗಳೂರು, ಜುಲೈ 03: ಮತ್ತೆ ಮನುಷ್ಯನೆಂಬ ಹಿಂಸ್ರ ಪ್ರಾಣಿಯ ಕ್ರೌರ್ಯಕ್ಕೆ ಬೆಚ್ಚಿ ಬಿದ್ದಿದೆ ಮಂಗಳೂರು. ತನ್ನ ಪಾಡಿಗೆ ತಾನು ಬದುಕುತ್ತಾ, ಅಲ್ಲಿ ಜನರು ಬೇಡವೆಂದು ಒಗೆದು ಬಿಸಾಕಿದ ಆಹಾರವನ್ನು ತಿಂದು ‘ ಸ್ಕಾವೆಂಜಿಂಗ್’ ಕೆಲಸ ಮಾಡಿ ಪರಿಸರ ಶುಚಿಮಾಡುವ ಆ ಬೀದಿ ನಾಯಿ ಏನು ತಾನೇ ಹೆಚ್ಚಿಗೆ ತೊಂದರೆ ಮಾಡೀತು ?! ಹೆಚ್ಚೆಂದರೆ, ತಾನಿರುವ ಬೀದಿಯಲ್ಲಿ ರಾತ್ರಿಯ ಹೊತ್ತು ಅಪರಿಚಿತ ಆಗಂತುಕರು ಎಂಟ್ರಿ ಕೊಟ್ಟರೆ ಬೊಗಳೀತು. ಯಾರೋ ಒಂದು ತುಂಡು ರೊಟ್ಟಿ ಪೀಸ್ ಎಸೆದರೆ ಸಾಕು ಆತನನ್ನು ಜೀವಮಾನ ಮರೆಯದ ನಿಯತ್ತಿನ ಪ್ರಾಣಿಗಳು ಬೀದಿ ನಾಯೆಂದು ಹೀಗಳಿಕೆಯಿಂದ ನಾವು ಕರೆಯುವ ಆ ಜೀವಿಗಳು. ಆತ ಸಂಬಳವಿಲ್ಲದ ಕಾವಲುಗಾರ. ಅಂತಹ ನಿಯತ್ತಿನ ಪ್ರಾಣಿಯ ಹೊಟ್ಟೆ ಹೊಕ್ಕು ಕೂತಿದೆ ಗುಂಡು.

ಬೀದಿ ನಾಯಿಯನ್ನು ಗುಂಡು ಹಾರಿಸಿ ಕೊಂದ ಈ ಆಘಾತಕಾರಿ ಪ್ರಕರಣ ಎಲ್ಲೋ ದೂರದಲ್ಲಿ ನಡೆದದ್ದಲ್ಲ. ಮಹಾನ್ ಬುದ್ದಿವಂತರ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಿಂದ ಜು .2 ರಂದು ಇದು ವರದಿಯಾಗಿದೆ. ಅಂದು ನಾಯಿಯನ್ನು ಬೈಕ್ ಗೆ ಕಟ್ಟಿ ಎಳೆದೊಯ್ದ ಘಟನೆಯ ನೆನಪು ಹಸಿರಾಗಿರುವಾಗಲೆ ಮತ್ತೊಂದು ಮೂಕ ಪ್ರಾಣಿಯ ಮೇಲೆ ಮತ್ತೊಂದು ಅಮಾನವೀಯ ಕೃತ್ಯ ಎಸಗಿರುವ ಪ್ರಕರಣ ನಡೆದಿರುವುದು ಪ್ರಾಣಿ ಪ್ರಿಯರಲ್ಲಿ ಬೇಸರ ಮೂಡಿಸಿದೆ.

ಮಂಗಳೂರು ನಗರದ ಶಿವಭಾಗ್ ಬಳಿಯ ರಸ್ತೆಯಲ್ಲಿ ಬೀದಿ ನಾಯಿಯನ್ನು ಗುಂಡು ಹೊಡೆದು ಸಾಯಿಸಲಾಗಿದೆ. ಶಿವಭಾಗ್ ರಸ್ತೆಯಲ್ಲಿ ಪ್ರತಿನಿತ್ಯ ಓಡಾಡುತ್ತಿದ್ದ ಬೀದಿ ನಾಯಿಗೆ ವ್ಯಕ್ತಿಯೊಬ್ಬ ಗುಂಡುಹಾರಿಸಿ ಹತ್ಯೆ ಮಾಡಿದ್ದಾನೆ. ಕೃತ್ಯವನ್ನು ಸ್ಥಳೀಯ ವ್ಯಕ್ತಿ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಜು 2 ರಂದು ರಕ್ತದ ಮಡುವಿನಲ್ಲಿ ಬೀದಿ ನಾಯಿಯೊಂದು ಸತ್ತು ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದರು. ಆ ಸಂದರ್ಭದಲ್ಲಿ ಅದರ ದೇಹದಲ್ಲಿ ಗಾಯ ಕಂಡುಬಂದಿದೆ. ಬಳಿಕ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ನಾಯಿಯ ದೇಹದೊಳಗೆ ಗುಂಡು ಪತ್ತೆಯಾಗಿದೆ.

ಈ ಘಟನೆಯ ಬಗ್ಗೆ ಅನಿಮಲ್ ಕೇರ್ ಟ್ರಸ್ಟ್ ಮುಖ್ಯಸ್ಥೆ ಸುಮಾ ರಮೇಶ್ ಅವರು ಕದ್ರಿ ಠಾಣೆಗೆ ದೂರು ನೀಡಿದ್ದೂ ಅದರಂತೆ ಪ್ರಕರಣ ದಾಖಲಾಗಿದೆ ಇನ್ನು ಈ ಹಿಂದೆ ಮಂಗಳೂರು ನಗರದಲ್ಲಿ ಬೈಕ್ ಗೆ ನಾಯಿಯನ್ನು ಕಟ್ಟಿ ಎಳೆದೊಯ್ದ ಎರಡು ಘಟನೆಗಳು ನಡೆದಿತ್ತು. ಆ ಕೃತ್ಯದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಇದೀಗ ಮತ್ತೊಂದು ದುಷ್ಕೃತ್ಯ ಎಸಗಲಾಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಆಹಾರಕ್ಕಾಗಿ ಪ್ರಾಣಿಗಳನ್ನು ನಾವು ಕೊಲ್ಲುತ್ತೇವೆ. ಈ ಕೊಲೆ ಯಾಕಾಗಿ ಎನ್ನುವುದಕ್ಕೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ. ನಾಯಿಗೆ ಗುಂಡು ಹಾಕಿಸುವಷ್ಟು ಅಗ್ಗದಲ್ಲಿ ಕೋವಿ, ಪಿಸ್ತೂಲ್ ಮದ್ದುಗುಂಡು ಅಗ್ಗವಾಗಿದೆಯೆ ಮಂಗಳೂರಿನಲ್ಲಿ ?! ಪೊಲೀಸರು ಉತ್ತರ ಕಂಡುಹಿಡಿಯಬೇಕು.

Leave A Reply

Your email address will not be published.