ಹೆಣ್ಣೆಂಬ ಕಾರಣಕ್ಕೆ ನವಜಾತ ಶಿಶುವನ್ನು ಬಚ್ಚಲು ಮನೆಯ ಕಿಟಕಿಗೆ ನೇಣು ಹಾಕಿ ಕೊಂದ ಪಾಪಿ ತಾಯಿ
ಹೆಣ್ಣೆಂಬ ಕಾರಣಕ್ಕೆ ನವಜಾತ ಶಿಶುವೊಂದನ್ನು ಬಚ್ಚಲು ಕೋಣೆಯ ಕಿಟಕಿಗೆ ನೇಣು ಹಾಕಿ ಕೊಂದಿರುವ ಅತ್ಯಂತ ಅಮಾನವೀಯ ಘಟನೆ ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಆಗತಾನೇ ಹುಟ್ಟಿದ ಮಗುವನ್ನು ಬಚ್ಚಲ ಕೋಣೆಯ ಕಿಟಕಿಗೆ ನೇತುಹಾಕಲಾಗಿದೆ. ಆಸ್ಪತ್ರೆಯ ಸಿಬ್ಬಂದಿ ಬೆಳಗ್ಗೆ 8 ಗಂಟೆ ಸುಮಾರಿಗೆ ಆಸ್ಪತ್ರೆಯನ್ನು ಸ್ವಚ್ಚಗೊಳಿಸುತ್ತಿದ್ದ ಸಮಯದಲ್ಲಿ ಬಚ್ಚಲಿನ ಬಾಗಿಲು ಬಂದ್ ಆಗಿತ್ತು. ಸ್ವಚ್ಚಗೊಳಿಸಲೆಂದು ಎರಡು ಮೂರು ಸಲ ಹೋದಾಗಲೂ ಬಾಗಿಲು ಹಾಕಿತ್ತು.
ನಂತರ ಬೆಳಗ್ಗೆ 9 ಗಂಟೆ ಸಮಯದಲ್ಲಿ ಹೋಗಿ ನೋಡಿದಾಗ ಅಲ್ಲಿ ಹೆರಿಗೆಯಾದ ವಾಸನೆ ಬಂದಿದೆ. ತಕ್ಷಣ ಸಿಬ್ಬಂದಿ ಆಚೀಚೆ ನೋಡಿ ಕಣ್ಣೆತ್ತಿ ಗಮನ ಹರಿಸಿದಾಗ ಆಗ ತಾನೆ ಜನಿಸಿದ ಹೆಣ್ಣು ನವಜಾತ ಶಿಶು ನೇತಾಡುತ್ತಿರುವುದು ಕಂಡುಬಂದಿದೆ.
ನವಜಾತ ಶಿಶುವನ್ನು ನೇತು ಹಾಕಿದ್ದನ್ನು ನೋಡಿ ಗಾಬರಿಗೊಂಡ ಆಸ್ಪತ್ರೆ ಸಿಬ್ಬಂದಿ ವೆಂಕಟೇಶ ಕೂಡಲೇ ವಿಷಯವನ್ನು ಕರ್ತವ್ಯ ನಿರತ ವೈದ್ಯ ಡಾ.ಜಯರಾಮ್ ಅವರಿಗೆ ತಿಳಿಸಿದ್ದಾರೆ. ತಕ್ಷಣ ವೈದ್ಯರು, ದಾದಿಯರು ಬಂದು ಪರಿಶೀಲಿಸಿದಾಗ ಮಗು ನೇತಾಡುತ್ತಾ ಉಸಿರಾಡುತ್ತಿತ್ತು. ತಡಮಾಡದೇ ಚಿಕಿತ್ಸೆ ನೀಡಲು ವೈದ್ಯರು ಪ್ರಯತ್ನಿಸಿದರಾದರೂ ಅಷ್ಟರಲ್ಲಿ ನವಜಾತ ಶಿಶು ಮೃತಪಟ್ಟಿದೆ.
ಸ್ಥಳಕ್ಕೆ ಚಿಂತಾಮಣಿ ಪೊಲೀಸರು ಬಂದು ಪರಿಶೀಲಿಸಿ, ನಂತರ ಸಿಸಿಟಿವಿಯ ಮೊರೆ ಹೋಗಿದ್ದು ಆಸ್ಪತ್ರೆಗೆ ಬಂದ ಗರ್ಭಿಣಿಯರು ಹಾಗೂ ಹೆರಿಗೆಯಾದವರ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ಹಾಗೆಯೇ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು ಭೇಟಿ ನೀಡಿದ್ದು, ಆಸ್ಪತ್ರೆಯ ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ.