ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವುದು ಕೇವಲ 5 ತಾಲೂಕು ಪಂಚಾಯತ್ ಗಳು!!??
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಳು ತಾಲೂಕುಗಳಿದ್ದರೂ, ಜಿಲ್ಲಾ ಪಂಚಾಯಿತಿಯ ಅಧಿಕೃತ ವೆಬ್ಸೈಟ್ನಲ್ಲಿ ಇವುಗಳ ಸಂಖ್ಯೆ ಇನ್ನೂ 5!
ಹೌದು, ವೆಬ್ಸೈಟ್ ಕೊನೇ ಬಾರಿಗೆ ಅಪ್ಡೇಟ್ ಆಗಿದ್ದು ಏ.30ರಂದು. ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಪುತ್ತೂರು ಮತ್ತು ಸುಳ್ಯ ತಾಲೂಕು ಪಂಚಾಯಿತಿಗಳ ಹೆಸರು ಮಾತ್ರವೇ ಇದ್ದು, ಎರಡು ವರ್ಷಗಳ ಹಿಂದೆ ಹೊಸ ತಾಲೂಕುಗಳಾಗಿ ಸೇರ್ಪಡೆಯಾಗಿದ್ದ ಕಡಬ ಮತ್ತು ಮೂಡುಬಿದಿರೆ ತಾ.ಪಂ ಹೆಸರೇ ಇಲ್ಲ. ಪ್ರಸ್ತುತ ತಾಪಂ ಕಟ್ಟಡ, ಚುನಾಯಿತ ಜನಪ್ರತಿನಿಧಿಗಳು, ತಾಲೂಕು ವ್ಯಾಪ್ತಿಯ ಗ್ರಾಮಗಳ ಪಟ್ಟಿ ಎಲ್ಲವೂ ಇದೆ.
ಮೂಡುಬಿದಿರೆ ಮತ್ತು ಕಡಬ ತಾಲೂಕುಗಳಿಗೆ ಸಂಬಂಧಿಸಿದಂತೆ ಜಿ.ಪಂ ವೆಬ್ಸೈಟ್ನ ನಕ್ಷೆಯೂ ಲಭ್ಯವಿಲ್ಲ. ಉಳಿದ ಐದು ತಾಲೂಕುಗಳ ಸಂಪೂರ್ಣ ಮಾಹಿತಿಯಿರುವ ಮ್ಯಾಪ್ ಜಾಲತಾಣದಲ್ಲಿ ಇನ್ನೊಂದೆಡೆ ಜಿಲ್ಲಾಧಿಕಾರಿ ಕಚೇರಿ ವೆಬ್ಸೈಟ್ನಲ್ಲಿ ಒಟ್ಟು ಜಿಲ್ಲೆಯ ನಕ್ಷೆಯಲ್ಲಿ ಕಡಬ-ಮೂಡುಬಿದಿರೆ ತಾಲೂಕನ್ನು ಬೇರೆ ಬೇರೆ ಬಣ್ಣಗಳಿಂದ ಗುರುತಿಸಲಾಗಿದೆ. ಆದರೆ ಆಯಾ ತಾಲೂಕುಗಳ ನಕ್ಷೆ ಇರುವಲ್ಲಿ ಈ ಎರಡು ತಾಲೂಕುಗಳ ಹೆಸರಿಲ್ಲ. ತಾಲೂಕು ವ್ಯಾಪ್ತಿಯಲ್ಲಿ ನಕ್ಷೆಯೂ ಇದ್ದರೂ, ಇಲ್ಲಿ ಅಪ್ಲೋಡ್ ಮಾಡಿಲ್ಲ.
ಗ್ರಾಮ ಪಂಚಾಯಿತಿಗಳ ಮಾಹಿತಿ ನೀಡುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಪಂಚಮಿತ್ರ ವೆಬ್ಸೈಟ್ನಲ್ಲಿ ಎಲ್ಲ ತಾಲೂಕುಗಳ ಮಾಹಿತಿ ಅಪ್ಡೇಟ್ ಆಗಿದೆ. ಜಿಲ್ಲೆಯ ಏಳು ತಾಲೂಕುಗಳ ಹೆಸರಿದ್ದು, ಅದಕ್ಕೆ ಕ್ಲಿಕ್ ಮಾಡಿದರೆ, ಆಯಾ ತಾಲೂಕು ವ್ಯಾಪ್ತಿಯ ಗ್ರಾಮಗಳ ಮಾಹಿತಿ ದೊರೆಯುತ್ತದೆ.
ಇಂತಹ ವಿಷಯದಲ್ಲೇ ನಿರ್ಲಕ್ಷ್ಯ ಧೋರಣೆ ತಳೆದಿರುವ ಜಿಲ್ಲಾ ಪಂಚಾಯತ್, ಅಭಿವೃದ್ಧಿ ಕಾರ್ಯಗಳನ್ನು ಹೇಗೆ ನಿಭಾಯಿಸುತ್ತದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.