ಗ್ರಾಹಕರಿಗೆ ಶಾಕ್ ನೀಡಿದ‌ ಎಸ್‌ ಬಿಐ | ನಾಳೆಯಿಂದ ಎಟಿಎಂ, ಬ್ಯಾಂಕ್ ನಿಂದ ವಿತ್ ಡ್ರಾ ಹಾಗೂ ಚೆಕ್ ಬುಕ್ ಪಡೆಯಲು ಹೊಸ ಶುಲ್ಕ

ಜುಲೈ 1 ರಿಂದ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಶೂನ್ಯ ಬ್ಯಾಲೆನ್ಸ್ ಖಾತೆ ಅಥವಾ ಸಾಮಾನ್ಯ ಉಳಿತಾಯ ಬ್ಯಾಂಕ್ ಠೇವಣಿ ಖಾತೆ ಹೊಂದಿರುವ ಗ್ರಾಹಕರು ಎಟಿಎಂ ನಿಂದ, ಬ್ಯಾಂಕ್ ಶಾಖೆಗಳಿಂದ ಹಣ ಹಾಗೂ ಚೆಕ್ ಬುಕ್ ಪಡೆಯಲು ಕೊಡಬೇಕಿರುವ ಶುಲ್ಕಗಳು ಬದಲಾಗಲಿದೆ ಎಂದು ತಿಳಿದು ಬಂದಿದೆ.

ಪರಿಷ್ಕೃತ ನಿಯಮ ಜುಲೈ 1ರಿಂದ ಜಾರಿಗೆ ಬರಲಿದ್ದು, ವಿವಿಧ ಸೇವೆಗಳ ಮೇಲಿನ ಶುಲ್ಕವು 15 ರಿಂದ 75ರವರೆಗೆ ಇರಲಿದೆ ಎನ್ನಲಾಗಿದೆ. ಇನ್ನು ಎಟಿಎಂ ಮತ್ತು ಶಾಖೆಗಳಿಂದ ಶುಲ್ಕವಿಲ್ಲದೆ ತಿಂಗಳಿಗೆ ನಾಲ್ಕು ಬಾರಿ ಮಾತ್ರ ಹಣ ಪಡೆಯಬಹುದು. ಆ ಬಳಿಕ ಪ್ರತಿ ಬಾರಿ ಹಣ ಹಿಂಪಡೆದಾಗಲೂ ರೂ.15 ಹಾಗೂ ಜಿಎಸ್‌ಟಿ ಪಾವತಿಸಬೇಕು. ಎಸ್‌ಬಿಐಯೇತರ ಬ್ಯಾಂಕ್‌ಗಳ ಎಟಿಎಂ ನಿಂದ ಹಣ ಪಡೆಯಲೂ ಇದು ಅನ್ವಯವಾಗುತ್ತದೆ ಎಂದು ವರದಿಯಾಗಿದೆ.

ಈಗ ಹಣಕಾಸು ವರ್ಷವೊಂದರಲ್ಲಿ 10 ಚೆಕ್‌ಗಳಿರುವ ಚೆಕ್‌ಬುಕ್ ನ್ನು ಎಸ್‌ಬಿಐ ಉಚಿತವಾಗಿ ನೀಡುತ್ತಿದ್ದು, ಇದಕ್ಕಿಂತ ಹೆಚ್ಚು ಬೇಕಿದ್ದಲ್ಲಿ, 10 ಚೆಕ್‌ಗಳ ಒಂದು ಚೆಕ್‌ಬುಕ್‌ಗೆ 40 ಶುಲ್ಕ, ಜಿಎಸ್‌ಟಿ ಪಾವತಿಸಬೇಕು. 25 ಚೆಕ್‌ಗಳಿರುವುದಕ್ಕೆ 75 ಶುಲ್ಕ, ಜಿಎಸ್‌ಟಿ ಪಾವತಿಸಬೇಕು. ತುರ್ತಾಗಿ ಚೆಕ್‌ಬುಕ್ ಬೇಕಾದಲ್ಲಿ 10 ಚೆಕ್‌ಗಳಿರುವುದಕ್ಕೆ ತಲಾ 50 ಶುಲ್ಕ, ಜಿಎಸ್‌ಟಿ ಪಾವತಿಸಬೇಕು. ಆದರೆ ಹಿರಿಯ ನಾಗರಿಕರು ಶುಲ್ಕ ಪಾವತಿಸಬೇಕೆಂದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಒಟ್ಟಾರೆಯಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಬ್ಯಾಂಕ್ ಕೂಡ ಗ್ರಾಹಕರಿಗೆ ಈ ರೀತಿಯ ಶಾಕ್ ನೀಡಿದೆ.

Leave A Reply

Your email address will not be published.