ನೆಲ್ಯಾಡಿ : ಫರ್ನಿಶಿಂಗ್ ಆಯಿಲ್ ಮಿಕ್ಸಿಂಗ್ ದಂಧೆ | ಪೊಲೀಸರ ಮಿಂಚಿನ ದಾಳಿ, ನಾಲ್ವರು ಆರೋಪಿಗಳ ಬಂಧನ
ಮಂಗಳೂರು : ನೆಲ್ಯಾಡಿ ಹೊಸಮಜಲು ಎಂಬಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಬೃಹತ್ ಫರ್ನಿಶಿಂಗ್ ಆಯಿಲ್ ಮಿಕ್ಸಿಂಗ್ ಅಡ್ಡೆ ಮೇಲೆ ಪುತ್ತೂರು ಡಿವೈಎಸ್ಪಿ ಗಾನಾ.ಪಿ ಕುಮಾರ್ ಅವರ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ.
ಈ ವೇಳೆ ಎರಡು ಟ್ಯಾಂಕರ್, ಮಿಕ್ಸಿಂಗ್ ಗೆ ಬಳಸುತ್ತಿದ್ದ ಉಪಕರಣಗಳು ಸೇರಿದಂತೆ ಹಲವು ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಹೊಸಮಜಲು ಸೇತುವೆಯ ಬಳಿ ಕೆಲವು ವರ್ಷಗಳಿಂದ ಈ ಆಯಿಲ್ ಮಿಕ್ಸಿಂಗ್ ದಂಧೆ ನಡೆಯುತ್ತಿತ್ತು.
ಮಂಗಳವಾರ ಸಂಜೆ ಪುತ್ತೂರು ಡಿವೈಎಸ್ಪಿ ಗಾನಾ ಪಿ.ಕುಮಾರ್ ನೇತೃತ್ವದ ಪೊಲೀಸರ ತಂಡವು ಈ ಅಡ್ಡೆಗೆ ದಾಳಿ ಮಾಡಿ ಅಕ್ರಮವನ್ನು ಪತ್ತೆಹಚ್ಚಿದೆ. ಪೊಲೀಸರು ದಾಳಿ ಮಾಡುವ ಸಮಯದಲ್ಲಿ ಎರಡು ಟ್ಯಾಂಕರ್ಗಳಲ್ಲಿ ಫರ್ನಿಶಿಂಗ್ ಆಯಿಲ್ ಮಿಕ್ಸಿಂಗ್ ದಂಧೆ ನಡೆಯುತ್ತಿತ್ತು. ದಾಳಿ ಮಾಡಿದ ಸಮಯದಲ್ಲಿ ಸುಮಾರು 36 ಸಾವಿರ ಲೀಟರ್ನಷ್ಟು ಫರ್ನಿಶಿಂಗ್ ಆಯಿಲ್ ಪತ್ತೆಯಾಗಿದೆ.
ಭೂಗತವಾಗಿ ಎರಡು ಬೃಹತ್ ಟ್ಯಾಂಕ್ ಗಳು, ವಿದ್ಯುತ್ ಹಾಗೂ ಡೀಸೆಲ್ ಚಾಲಿತ ಪಂಪುಗಳು ಪತ್ತೆಯಾಗಿದೆ. ವಿಪರ್ಯಾಸವೆಂದರೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಯಾವುದೇ ಹೆದರಿಕೆ ಇಲ್ಲದೇ ಈ ದಂಧೆ ನಡೆಯುತ್ತಿತ್ತು.ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ, ಎಎಸ್ಪಿ ವಿ.ಬಿ ಭಾಸ್ಕರ್, ಕಡಬ ತಹಶಿಲ್ದಾರ್ ಅನಂತಶಂಕರ್, ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಸುಷ್ಮಾ, ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಮತ್ತು ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.