ಲಸಿಕೆ ಲಭ್ಯತೆ ಕುರಿತು ಆ್ಯಪ್ ಕಂಡುಹಿಡಿದ ಕರಾವಳಿಯ ಯುವಕರು
ಕೋಟ: ಕೋವಿಡ್ ಲಸಿಕೆ ಲಭ್ಯತೆ ಬಗ್ಗೆ ಮಾಹಿತಿ ನೀಡುವ ವ್ಯಾಕ್ಟ್ರ್ಯಾಕ್ (vactrack) ಎಂಬ ಸರಳ ಆ್ಯಪ್ ಒಂದನ್ನು ಕರಾವಳಿಯ ಇಬ್ಬರು ಯುವಕರು ಆವಿಷ್ಕರಿಸಿದ್ದಾರೆ.
ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಫ್ಟ್ವೇರ್ ಇಂಜಿನಿಯರ್ಗಳಾದ ಸಾಲಿಗ್ರಾಮ ಕಾರ್ಕಡದ ರಾಮದಾಸ್ ನಾಯಕ್ ಮತ್ತು ಮಂಗಳೂರಿನ ಕಾರ್ತಿಕ್ ಕಾಮತ್ ಕೊಂಚಾಡಿ ಆ್ಯಪ್ ರೂಪಿಸಿದವರು. ಈ ಆ್ಯಪ್ ಮನೆ ಸಮೀಪ ಲಸಿಕೆ ಇರುವಾಗ ಅಲರಾಂ ಮೂಲಕ ಬಳಕೆದಾರರಿಗೆ ಮಾಹಿತಿ ನೀಡುವುದರಿಂದ ಹೆಚ್ಚು ಪ್ರಯೋಜನಕಾರಿಯಾಗಿದೆ.
ಗೂಗಲ್ ಪ್ಲೇ ಸ್ಟೋರ್ನಲ್ಲಿ ಆ್ಯಪ್ ಲಭ್ಯವಿದ್ದು, ಡೌನ್ಲೋಡ್ ಮಾಡಿಕೊಂಡ ಬಳಿಕ ಪಿನ್ಕೋಡ್ ನಮೂದಿಸಬೇಕು. ಬಳಿಕ ಯಾವುದೇ ಸಮಯದಲ್ಲಿ ಹತ್ತಿರದ ಸರ್ಕಾರಿ/ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಬಂದಾಗ ಆ್ಯಪ್ ಅಲರಾಂ ಮೂಲಕ ಮಾಹಿತಿ ನೀಡುತ್ತದೆ. ಲಸಿಕೆ ಲಭ್ಯವಿದ್ದರೆ ನೋಂದಣಿಗಾಗಿ ಕೋವಿನ್ ವೆಬ್ಸೈಟ್ಗೆ ಲಿಂಕ್ ಒದಗಿಸುತ್ತದೆ.
‘ಜನಸಾಮಾನ್ಯರಿಗೆ ಇಂದಿನ ಸ್ಥಿತಿಗೆ ಅನುಗುಣವಾಗಿ ಆಧುನಿಕ ತಂತ್ರಜ್ಞಾನದ ಮೂಲಕ ಸುಲಭ ರೀತಿಯ ಆವಿಷ್ಕಾರಕ್ಕೆ ಕೈಹಾಕಿದ್ದೇವೆ. ಮುಂದೆ ಲಸಿಕೆ ಮತ್ತು ಆಸ್ಪತ್ರೆಯನ್ನು ಆಯ್ಕೆ ಮಾಡಿ ನೇರವಾಗಿ ನೋಂದಣಿ ಮಾಡುವ ವ್ಯವಸ್ಥೆಯನ್ನು ಆ್ಯಪ್ಗೆ ಅಳವಡಿಸಲಾಗುವುದು’ ಎಂದು ರಾಮದಾಸ್ ನಾಯಕ್ ಪ್ರತಿಕ್ರಿಯಿಸಿದ್ದಾರೆ.
ಈ ರೀತಿಯ ಆ್ಯಪ್ ನಿಂದ ಲಸಿಕೆ ಪಡೆದುಕೊಳ್ಳಲು ಕಾಯಬೇಕಾದ ಪರಿಸ್ಥಿತಿ ಇರುವುದಿಲ್ಲ. ಬಹಳ ಪ್ರಯೋಜನಕಾರಿಯಾಗಿ ಈ ಆ್ಯಪ್ ನ್ನು ಆವಿಷ್ಕರಿಸಲಾಗಿದೆ. ಈ ಆ್ಯಪ್ ಕಂಡುಹಿಡಿದಿರುವವರು ನಮ್ಮ ಕರಾವಳಿಯವರು ಎಂಬುದೇ ನಮಗೆಲ್ಲಾ ಹೆಮ್ಮೆಯ ವಿಚಾರ.