ಇನಾಮ್ತಿ ಕಾಯ್ದೆಗೆ ತಿದ್ದುಪಡಿ ತರಲು ಸರಕಾರ ನಿರ್ಧಾರ | ರೈತರಿಗೆ ಸಿಹಿ ಸುದ್ದಿ ನೀಡಿದ ಕಂದಾಯ ಸಚಿವ ಆರ್.ಅಶೋಕ್
ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಇನಾಮ್ತಿ ಜಮೀನು ಕಾಯ್ದೆಗೆ ತಿದ್ದುಪಡಿ ತರಲು ಸರಕಾರ ಚಿಂತನೆ ನಡೆಸಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ರಾಜ್ಯದಲ್ಲಿ 70 ಸಾವಿರ ಎಕರೆಗಿಂತ ಹೆಚ್ಚಿನ ಭೂಮಿ ಇನಾಂ ಕಾಯ್ದೆಯ ವ್ಯಾಪ್ತಿಯಲ್ಲಿದೆ.
ರಾಜ ಮಹಾರಾಜರು, ಬ್ರಿಟಿಷರ ಕಾಲದಲ್ಲಿ 500, 1000 ಏಕರೆ ಇನಾಮ್ತಿ ಜಮೀನುಗಳನ್ನು ನೀಡಲಾಗಿತ್ತು.
ರೈತರು ಅಲ್ಲಿ ಉಳುಮೆ ಮಾಡಿಕೊಂಡಿದ್ದರು. ಇನಾಂ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದ ರೈತರಿಗೆ ಪಹಣಿ ಕೊಡುವ ಕೆಲಸ ಕೂಡಾ ಆಗುತ್ತಿತ್ತು. ಇನಾಂ ಕಾಯ್ದೆ ರದ್ದಾದಾಗ ತಿಳುವಳಿಕೆಯ ಕೊರತೆಯಿಂದ ಲಕ್ಷಾಂತರು ರೈತರು ಅರ್ಜಿಯನ್ನೇ ಸಲ್ಲಿಸಿರಲಿಲ್ಲ. ಈ ನಿಟ್ಟಿನಲ್ಲಿ ಅವರಿಗೊಂದು ಅವಕಾಶ ನೀಡುವ ನಿಟ್ಟಿನಲ್ಲಿ ಇನಾಂ ಜಮೀನು ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದ ಬೇರೆ ಬೇರೆ ಭಾಗಗಳಲ್ಲಿದ್ದ 70 ಸಾವಿರ ಎಕರೆ ಇನಾಂ ಜಮೀನು ಕುರಿತು ಪರಿಶೀಲನೆ ನಡೆಸಲು ನಿವೃತ್ತ ಅಧಿಕಾರಿ ಪಿ ಎಸ್ ವಸ್ತ್ರದ್ ನೇತೃತ್ವದಲ್ಲಿ ಸಮಿತಿ ರಚಿಲಾಗಿತ್ತು. ಆ ಸಮಿತಿಯು ರೈತರಿಗೆ ಅರ್ಜಿ ಸಲ್ಲಿಸಲು ಒಂದಿಷ್ಟು ಕಾಲಾವಕಾಶ ನೀಡುವಂತೆ ವರದಿಯಲ್ಲಿ ತಿಳಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಕಾಲಾವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.