ಪರಸ್ಪರ ಕೈಗೆ ಕೊಳ ಹಾಕಿಕೊಂಡು 123 ದಿನ ಕಳೆದ ಜೋಡಿ | ಕೋಳ ಬಿಚ್ಚುವ ದಿನ ಮದುವೆಯಾಗುವ ಅವರ ಪ್ಲಾನ್ ಫ್ಲಾಪ್ ಆದದ್ದು ಯಾಕೆ ಗೊತ್ತಾ ?!

ಉಕ್ರೇನ್‌ನ ರಾಜಧಾನಿ ಕೀವ್ ನಲ್ಲಿ ಇಬ್ಬರು ಜೊತೆಗಾರರು ದಂಪತಿ ವಿಶಿಷ್ಟ ಕಾರಣಕ್ಕಾಗಿ ಗಮನ ಸೆಳೆದಿದ್ದಾರೆ.

ಒಂದಲ್ಲ ಎರಡಲ್ಲ ಬರೋಬ್ಬರಿ 123 ದಿನಗಳ ಕಾಲ ಪರಸ್ಪರ ಕೈಗೆ ಕೋಳ ಹಾಕಿಕೊಂಡು ಅವರು ಒಟ್ಟಿಗೆ ದಿನ ರಾತ್ರಿ ಕಳೆದಿದ್ದಾರೆ. ಇದೇ ಕಾರಣಕ್ಕಾಗಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ಈಗ ಚರ್ಚೆಯಾಗ್ತಿದ್ದಾರೆ. 123 ದಿನಗಳ ಕಾಲ ಒಟ್ಟಿಗಿದ್ದ ಈ ಜೋಡಿ ವಿಶ್ವ ದಾಖಲೆ ಬರೆದಿದ್ದಾರೆ. ಆದರೆ ವಿಶ್ವದಾಖಲೆಯೇನೋ ಆಗಿ ಹೋಯಿತು. ಆದರೆ ಪರಸ್ಪರ ಮದುವೆಯಾಗಿ ಜೀವನ ಪೂರ್ತಿ ಜೊತೆಗಿರುವ ಅವರ ಕನಸು ಭಗ್ನವಾಗಿದೆ.

33 ವರ್ಷದ ಅಲೆಕ್ಸಾಂಡರ್ ಮತ್ತು 29 ವರ್ಷದ ವಿಕ್ಟೋರಿಯಾ 123 ದಿನಗಳ ಹಿಂದೆ ಉಕ್ರೇನ್ ರಾಜಧಾನಿ ಕೀವ್‌ನಲ್ಲಿರುವ ಯೂನಿಟಿ ಸ್ಮಾರಕದ ಎದುರು ಪರಸ್ಪರ ಕೈಗೆ ಕೋಳ ಹಾಕಿಕೊಂಡರು. ಇಬ್ಬರೂ ಅಲ್ಲೇ ಕೈಕೋಳ ಕಳಚಿದ್ದಾರೆ. ಕೈಕೋಳ ತೆಗೆಯುತ್ತಿದ್ದಂತೆ ಇಬ್ಬರೂ ಖುಷಿಯಿಂದ ಕುಣಿದಾಡಿ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ.

ಮೊದಲು ಕೈಗೆ ಕೋಳ ಹಾಕಿಕೊಳ್ಳುವ ಸಂದರ್ಭದಲ್ಲಿ ತುಂಬಾ ಮಜವಾಗಿತ್ತು. ಇಬ್ಬರ ಮಧ್ಯೆ ತೀವ್ರ ಆಕರ್ಷಣೆಯಿತ್ತು. ನಾವಿಬ್ಬರೂ ಸದಾ ಜೊತೆಗಿದ್ದರೆ ಅದೆಷ್ಟು ಚೆನ್ನ ಎಂದು ಅವರು ಅಂದುಕೊಂಡಿದ್ದರು. ತಾನು ಪ್ರೀತಿಸುವ ವ್ಯಕ್ತಿ ತಮಗೆ ಅಂಟಿಕೊಂಡಿದ್ದರೆ ಸಂಭ್ರಮಿಸಲು ಇನ್ನೇನು ಬೇಕು ಎನ್ನುವುದು ಅವರ ನಿಲುವಾಗಿತ್ತು. ಆದ್ರೆ ಬರಬರುತ್ತಾ ತೀರ ನಿಕಟವಾಗಿ ಮೈಗೆ ಮೈ ಅಂಟಿಕೊಂಡು ಬದುಕುವುದು ಕಷ್ಟ ಆಗಲು ಪ್ರಾರಂಭ ಆಯಿತು. ಸ್ನಾನಕ್ಕೆ ಹೋದಾಗ, ಕೊನೆಗೆ ಟಾಯ್ಲೆಟ್ ನಲ್ಲಿ ಮುಖ ಸಿಂಡರಿಸಿಕೊಂಡು ಕೂತಾಗ ಕೂಡ, ಜೊತೆಗೆ ಇನ್ನೊಬ್ಬರನ್ನು ಕರೆದುಕೊಂಡು ಹೋಗಬೇಕಾದ ಅನಿವಾರ್ಯತೆಯಲ್ಲಿ ಅವರು 123 ದಿನ ಕಳೆದಿದ್ದರು. ಕೊನೆಗೊಂದು ದಿನ, ಅತಿಯಾದ ಏಕಾಂತ ಅವರಿಬ್ಬರಿಗೆ ಮುಳ್ಳಿನಂತೆ ಚುಚ್ಚಿ ಕಾಡಿದೆ. ಅಲೆಕ್ಸಾಂಡರ್ ಮಾತ್ರ, ವಿಕ್ಟೋರಿಯಾ ಜೊತೆ ಜೀವನ ನಡೆಸಲು ಬಯಸಿದ್ದ. ಇದೇ ಕಾರಣಕ್ಕೆ ಆಕೆ ಜೊತೆ 123 ದಿನ ಒಟ್ಟಿಗಿದ್ದ. ಆದ್ರೆ ವಿಕ್ಟೋರಿಯಾ ಮನಸ್ಸು ಮಾಡಲಿಲ್ಲ. ಇದೀಗ ವಾಸ್ತವ ಒಪ್ಪಿಕೊಂಡು ಇಬ್ಬರೂ ಬೇರೆಬೇರೆಯಾಗಲು ನಿರ್ಧರಿಸಿದ್ದಾರೆ.

ಒಟ್ಟಿಗೆ 123 ದಿನಗಳನ್ನು ಕಳೆದ ನಂತರ ಕೈ ಕೋಳವನ್ನು ಬಿಚ್ಚುವುದರೊಂದಿಗೆ, ಅವರಿಬ್ಬರ ಮಧ್ಯೆ ಮೂಡಿದ್ದ ಪ್ರೀತಿ ಕೂಡ ಕಳಚಿಬಿದ್ದಿದೆ. ನಾನು ಯಾವುದೇ ನಿರ್ಬಂಧವಿಲ್ಲದೆ ಬದುಕಲು ನಾನು ಇಚ್ಛಿಸಿದ್ದೇನೆ. ಹಾಗಾಗಿ ಬ್ರೇಕ್ ಅಪ್ ಮಾಡಿಕೊಳ್ತಿದ್ದೇನೆಂದು ವಿಕ್ಟೋರಿಯಾ ಹೇಳಿದ್ದಾಳೆ. ಹಳೆ ನೆನಪಿನೊಂದಿಗೆ ಜೀವನ ನಡೆಸುತ್ತೇನೆಂದು ಅಲೆಕ್ಸಾಂಡರ್ ಹೇಳಿದ್ದಾನೆ. ಮದುವೆಯಾಗುವ ಪ್ಲಾನ್ ನಲ್ಲಿದ್ದವರು ಈಗ ಬೇರೆ ಬೇರೆಯಾಗಿದ್ದಾರೆ.

Leave A Reply

Your email address will not be published.