ಧರ್ಮಸ್ಥಳಕ್ಕೆ ಬರುತ್ತಿದ್ದ 69 ವಾಹನಗಳನ್ನು ವಾಪಸ್ ಕಳಿಸಿದ ಪೊಲೀಸರು | ಗುಂಡ್ಯ ಚೆಕ್‌ಪೋಸ್ಟ್‌ನಲ್ಲಿ ಸರತಿ ಸಾಲಿನಲ್ಲಿ ನಿಂತ ಯಾತ್ರಾರ್ಥಿಗಳ ವಾಹನ
ಹೊರಜಿಲ್ಲೆಗಳಿಂದ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ದ.ಕ. ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಯವರ ಆದೇಶದಂತೆ ಗುಂಡ್ಯ ಚೆಕ್ ಪೋಸ್ಟ್ ನಲ್ಲಿ ಶನಿವಾರ ರಾತ್ರಿಯಿಂದ ಪೊಲೀಸರು ವಾಹನ ತಪಾಸಣೆಯನ್ನು ಬಿಗುಗೊಳಿಸಿದ್ದಾರೆ.
ಶನಿವಾರ ರಾತ್ರಿ 12ರಿಂದ ಮುಂಜಾನೆ 3 ಗಂಟೆಯ ವರೆಗೆ ಧರ್ಮಸ್ಥಳಕ್ಕೆಂದು ಬರುತ್ತಿದ್ದ 69 ವಾಹನಗಳನ್ನು ಚೆಕ್ ಪೋಸ್ಟ್ ನಲ್ಲಿ ತಡೆದು ವಾಪಸ್ ಕಳುಹಿಸಿದ್ದಾರೆ.
ಉಜಿರೆಯಲ್ಲಿಯೂ ವಾಹನ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ.
ಕಳೆದೆರಡು ಮೂರು ದಿನಗಳಿಂದ ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಹೊರಜಿಲ್ಲೆಗಳಿಂದ ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ ಮಾಹಿತಿಯ ಹಿನ್ನೆಲೆಯಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಬರುವ ವಾಹನಗಳನ್ನು ಮುಟ್ಟುಗೋಲು ಹಾಕಲು ಜಿಲ್ಲಾಧಿಕಾರಿ ಶನಿವಾರ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಚಾರ್ಮಾಡಿ ಮತ್ತು ಪೆರಿಯಶಾಂತಿಯಲ್ಲಿ ಹೆಚ್ಚುವರಿ ಚೆಕ್‌ಪೋಸ್ಟ್‌ಗಳ ಮೂಲಕ ತಪಾಸಣೆ ಮಾಡಲು ಪೊಲೀಸ್ ಇಲಾಖೆಗೆ ನಿರ್ದೇಶಿಸಿದ್ದಾರೆ.