ಕಷ್ಟದ ಕಾಲದಲ್ಲಿ ಆಪತ್ಬಾಂಧವನಂತೆ ಸೋಗು | ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೂಡಲೇ ಔಟ್ ಹೌಸ್ ಗೆ ಕರೆದೊಯ್ದು ಅಪ್ರಾಪ್ತ ಬಾಲಕಿಯ ಅತ್ಯಾಚಾರ..ಆರೋಪಿ ವಿರುದ್ಧ ಮಂಗಳೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು

ಅನಾರೋಗ್ಯದಿಂದ ಅಪ್ರಾಪ್ತ ಬಾಲಕಿಯು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದ ಸಂದರ್ಭ ದುರುಪಯೋಗಪಡಿಸಿಕೊಂಡು ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿದ ವೃತ್ತಾಂತ ಇದೀಗ ಹೊರಬಿದ್ದಿದೆ.ಒಳ್ಳೆಯವನಂತೆ ನಟಿಸಿ, ಅತ್ಯಾಚಾರವೆಸಗಿದ ಆರೋಪಿ ರಿಕ್ಷಾ ಚಾಲಕನ ಮೇಲೆ ಪ್ರಕರಣ ದಾಖಲಾಗಿದೆ.

ಆ ಅಪ್ರಾಪ್ತ ಬಾಲಕಿಯು ಅನಾರೋಗ್ಯದಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಳು.
ಆ ಬಳಿಕ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಾಗಲು ಆರೋಪಿಯ ರಿಕ್ಷಾದಲ್ಲಿ ತೆರಳಿದ್ದರು ಎನ್ನಲಾಗಿದೆ.

ಈ ಸಂದರ್ಭ ಆಕೆಯ ಮೊಬೈಲ್ ನಂಬರ್ ಅನ್ನು ಆರೋಪಿಯು ಪಡೆದುಕೊಂಡಿದ್ದ. ಆ ಬಳಿಕದಲ್ಲಿ ಆರೋಪಿಯು ಆಕೆಗೆ ಹಣ್ಣು ಹಂಪಲು, ಜ್ಯೂಸು ಮುಂತಾದವುಗಳನ್ನೆಲ್ಲ ನೀಡಿ ಒಳ್ಳೆಯವನಂತೆ ಫೋಸ್ ಕೊಟ್ಟು ನಟಿಸಿದ್ದ. ಕೋರೋನಾ ಪೀಡಿತ ಕಷ್ಟಕಾಲದಲ್ಲಿ, ಅದು ಆರೋಗ್ಯ ಸಂಬಂಧಿತ ವಿಷಯದಲ್ಲಿ ನರಳುತ್ತಿರುವಾಗ ಯಾರಾದರೂ ಸಹಾಯ ಮಾಡಿದರೆ ಯಾರಾದರೂ ಬೇಡ ಎನ್ನುವುದುಂಟೆ ? ಹಾಗೆ ಆ ಬಾಲಕಿ ಮತ್ತು ಮನೆಯವರು ಸಹಾಯಕ್ಕೆ ನಿಂತ ಆಪದ್ಬಾಂಧವನನ್ನು ನಂಬಿದ್ದಾರೆ.

ಆದರೆ ಜೂನ್ 16 ರಂದು ಆರೋಪಿಯು ಆ ಬಾಲಕಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ,ಆತನ ಪರಿಚಯದ ಮನೆಯೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಅಷ್ಟು ಮಾತ್ರವಲ್ಲದೇ, ವಿಷಯ ಹೊರಗೆಲ್ಲಿಯಾದರೂ ಬಾಯಿ ಬಿಟ್ಟರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅಪ್ರಾಪ್ತ ಬಾಲಕಿಯು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾಳೆ.

Leave A Reply

Your email address will not be published.