ಮಹಾಭಾರತದ ಕರ್ಣನ ಕಥೆ ನೆನಪಿಸುವ ಒಂದು ಘಟನೆ | 21 ದಿನದ ಮಗುವನ್ನು ಗಂಗೆಯಲ್ಲಿ ತೇಲಿ ಬಿಟ್ಟದ್ದು ಯಾಕಿರಬಹುದು ?
ಉತ್ತರ ಪ್ರದೇಶದ ಘಾಜಿಯಾಬಾದ್ ಜಿಲ್ಲೆಯ ದಾದ್ರಿ ಘಾಟ್ ಪ್ರದೇಶದಲ್ಲಿ 21 ದಿನದ ಹೆಣ್ಣು ಮಗುವನ್ನು ಮರದ ಬಾಕ್ಸ್ ಒಂದರಲ್ಲಿ ಇರಿಸಿ ನದಿಯಲ್ಲಿ ತೇಲಿ ಬಿಡಲಾಗಿದೆ.
ಆ ಮಗುವಿನ ಜನ್ಮಕುಂಡಲಿಯನ್ನೂ ಜೊತೆಯಲ್ಲಿ ಇಟ್ಟು, ಮಗುವಿನ ಹೆಸರು ಗಂಗಾ ಎಂದು ಬರೆದು ತೇಲಿ ಬಿಡಲಾಗಿದೆ. ಅದರ ಜೊತೆಯಲ್ಲಿ ಒಂದು ದೇವರ ಫೋಟೋ ಕೂಡ ಅಂಟಿಸಲಾಗಿದೆ.
ಮರದ ಬಾಕ್ಸ್‌ನಲ್ಲಿದ್ದ ಮಗುವಿನ ಚೀರಾಟ ಕಂಡು ಬಾಕ್ಸ್ ಬಳಿ ತೆರಳಿದ ಮೀನುಗಾರರಿಗೆ ಮಗು ಪತ್ತೆಯಾಗಿತ್ತು. ಇದಾದ ಬಳಿಕ ಈ ಅಚ್ಚರಿಯನ್ನು ನೋಡಲು ಸ್ಥಳಕ್ಕೆ ನೂರಾರು ಜನರು ಆಗಮಿಸಿದ್ದರು. ಮೀನುಗಾರಿಕೆ ಮಾಡುತ್ತಿದ್ದ ವ್ಯಕ್ತಿಯೇ ಮಗುವನ್ನು ಸಾಕುವ ಉದ್ದೇಶದಿಂದ ಮಗುವನ್ನು ಮನೆಗೆ ಕೊಂಡೊಯ್ದಿದ್ದನು. ಆದರೆ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ ಬಳಿಕ ಮಗುವನ್ನು ಪೊಲೀಸರು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದು, ಪೋಷಕರಿಗಾಗಿ ಹುಡುಕಾಟ ಶುರುವಾಗಿದೆ.
ಇದೀಗ ಆಶಾ ಜ್ಯೋತಿ ಅನಾಥಾಲಯಕ್ಕೆ ಮಗುವನ್ನು ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ. 21 ದಿನದ ಮಗುವನ್ನು ಉದ್ದೇಶಪೂರ್ವಕವಾಗಿಯೇ ನದಿಗೆ ಬಿಡಲಾಗಿದೆ ಎಂದು ಪೊಲೀಸರು ಕೂಡ ಶಂಕೆ ವ್ಯಕ್ತಪಡಿಸಿದ್ದಾರೆ.
ಗಂಗಾ ಎಂಬ ಹೆಸರಿನ ಈ ಮಗುವನ್ನು ತೇಲಿಬಿಟ್ಟ ಘಟನೆಯು ನಮಗೆ ಮಹಾಭಾರತದ ಕಥೆಯನ್ನು ನೆನಪಿಸುತ್ತದೆ. ಆ ದಿನ ಕನ್ಯೆ ಕುಂತಿದೇವಿ ತನಗೆ ದೊರೆತಿದ್ದ ವರವನ್ನು ಪರೀಕ್ಷಿಸಿಕೊಳ್ಳಲು, ಸೂರ್ಯ ಮಂತ್ರ ಪಠಿಸಿದ್ದಳು. ಹಾಗೆ ಆಕೆಯ ಮಡಿಲಿಗೆ ಕರ್ಣ ಬಿದ್ದಿದ್ದ. ಕನ್ಯೆಯಾಗಿದ್ದ ಕುಂತಿ ಆ ಮಗುವನ್ನು ಕಂಡು ಕನಲಿ ಹೋಗಿದ್ದಳು. ಒಂದು ಕ್ಷಣ ಆಕೆಗೆ ಏನು ಮಾಡಬೇಕೆಂದು ತೋಚಲಿಲ್ಲ. ಅಂತಹ ಅನಿರ್ಧಾರಿತ ಕ್ಷಣದಲ್ಲೇ ಆಕೆ ಕರ್ಣನನ್ನು ನದಿಯಲ್ಲಿ ತೇಲಿಬಿಟ್ಟದ್ದು. ಅದು ಪುರಾಣದ ಕಥೆ. ಮತ್ತೆ ಈಗ ಇಲ್ಲಿ ಯಾರೋ ಏನೋ ಉದ್ದೇಶಕ್ಕೆ ಮಗುವನ್ನು ತೇಲಿ ಬಿಟ್ಟಿದ್ದಾರೆ. ಕಾರಣದ ಬೆನ್ನುಹತ್ತಿ ಪೊಲೀಸರು ಹೊರಟಿದ್ದಾರೆ.
ಈ ನಡುವೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಗುವಿನ ಸಂಪೂರ್ಣ ಹೊಣೆಯನ್ನು ಸರ್ಕಾರ ನೋಡಿಕೊಳ್ಳಲಿದೆ ಎಂದು ಘೋಷಣೆ ಮಾಡಿದ್ದಾರೆ.ಮಗುವನ್ನು ಕಾಪಾಡಿದ ಅಂಬಿಗನಿಗೂ ಗೌರವಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅವರಿಗೆ ಮನೆ ಸೌಕರ್ಯವನ್ನ ಒದಗಿಸಲಿದೆ. ಜತೆಗೆ ಅವರಿಗೆ ಯೋಗ್ಯವಾದ ಯೋಜನೆ ಮೂಲಕವೂ ಅನುದಾನವನ್ನು ನೀಡುವ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ ಎಂದು ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಸರ್ಕಾರ ಸಾಕುವ ಹೊಣೆ ಹೊತ್ತಿದೆ. ಆದರೆ ಮಗುವಿಗೆ ಅಪ್ಪ ಅಮ್ಮ ಬೇಕಲ್ಲ. ಅದಕ್ಕಾಗಿ ಪಾಲಕರ ಪತ್ತೆಗಾಗಿ ಬಲೆ ಬೀಸಲಾಗಿದೆ. ನವಜಾತ ಮಗುವಿನ ಪ್ರಾಣದ ಜತೆ ಆಟ ಆಡಿದ ಹೆತ್ತವರ ಹುನ್ನಾರ ಏನಿತ್ತು ?! ಪ್ಲಾನ್ ಮಾಡಿ ಮಗುವಿಗೆ ತೇಲುವ ಪೆಟ್ಟಿಗೆ ಮಾಡಿಸಿ ಮಗುವನ್ನು ಗಂಗೆಯಲ್ಲಿ ಬಿಟ್ಟದ್ದು ಯಾವ ಕಾರಣಕ್ಕೆ ?! ಎನ್ನುವ ಕುತೂಹಲ ಮಗುವಿನ ಪೋಷಕರು ಸಿಗುವವರೆಗೆ ತಣ್ಣಗಾಗುವುದಿಲ್ಲ.