ಸವಣೂರು ಗ್ರಾ.ಪಂ.ಸೀಲ್‌ಡೌನ್ | ಗ್ರಾ.ಪಂ.ಕಾರ್ಯಪಡೆ ಸಭೆ
ಸವಣೂರು : ರಸ್ತೆಗೆ ಇಳಿದ ಎಲ್ಲರ ಕೋವಿಡ್ ಪರೀಕ್ಷೆ ಕಡ್ಡಾಯವಾಗಿ ಸವಣೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಮಾಡಲಾಗುವುದು,ಜಿಲ್ಲಾಧಿಕಾರಿಯವರು ಸೂಚಿಸಿದ ಅಗತ್ಯ ಸೇವೆ ಹೊರತು ಪಡಿಸಿ ಬ್ಯಾಂಕ್,ಪಡಿತರ ಅಂಗಡಿ ಸಹಿತ ಎಲ್ಲಾ ಸೇವೆಗಳನ್ನು ನಿರ್ಬಂಧಿಸಲಾಗಿದೆ.ನಿಯಮ ಉಲ್ಲಂಘನೆ ಮಾಡುವವರ ವಿರುದ್ದ ಜಿಲ್ಲಾ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಹೇಳಿದರು.
ಅವರು ಸೋಮವಾರ ಸವಣೂರು ಹಿ.ಪ್ರಾ.ಶಾಲೆಯಲ್ಲಿ ನಡೆದ ಸವಣೂರು ಗ್ರಾ.ಪಂ.ಕೋವಿಡ್ ಕಾರ್ಯಪಡೆಯ ಸಭೆಯಲ್ಲಿ ಮಾತನಾಡಿದರು.
ತೀರಾ ಅವಶ್ಯಕತೆ ಇದ್ದರೆ ಗ್ರಾ.ಪಂ.ಕಾರ್ಯಪಡೆಯ ಮೂಲಕವೇ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಬೇಕು ಆದರೆ ಇದು ಉಚಿತವಲ್ಲ.ಅವಶ್ಯಕತೆ ಇರುವವರು ಹಣ ಪಾವತಿ ಮಾಡಿಯೇ ವಸ್ತುಗಳನ್ನು ಪಡೆಯಬಹುದು.ಗ್ರಾ.ಪಂ.ವ್ಯಾಪ್ತಿಗೆ ಆಗಮನ ಹಾಗೂ ನಿರ್ಗಮನವನ್ನು ನಿರ್ಬಂಧಿಸಲಾಗಿದೆ.ಯಾವುದೇ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವವರಿಗೂ ಏಳುದಿನಗಳ ಕಾಲ ಅನುಮತಿ ನಿರಾಕರಿಸಲಾಗಿದೆ.ರಸ್ತೆಗೆ ಇಳಿಯುವ ಎಲ್ಲರ ಕೋವಿಡ್ ತಪಾಸಣೆ ನಡೆಸಲಾಗುತ್ತದೆ ಎಂದರು.
ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆ ಜಿಲ್ಲಾಧಿಕಾರಿಯವರ ಆದೇಶದಂತೆ ಸವಣೂರು ಗ್ರಾ.ಪಂ.ವ್ಯಾಪ್ತಿಯನ್ನು ಸೀಲ್‌ಡೌನ್ ಮಾಡಿ ಆದೇಶಿಸಿದ್ದು ಈ ಹಿನ್ನೆಲೆಯಲ್ಲಿ ಕಾರ್ಯಪಡೆ ಸಭೆ ಮಹತ್ವ ಪಡೆದುಕೊಂಡಿದೆ.
ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ ಮಾತನಾಡಿ,ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿತ್ಯ 100 ಮಂದಿಗೆ ಕೋವಿಡ್ ತಪಾಸಣೆ ಮಾಡುವಂತೆ ಆದೇಶ ಬಂದಿದೆ.ಸವಣೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೀಲ್‌ಡೌನ್ ಆದೇಶ ಮಾಡಿದ್ದಾರೆ.ಟೆಸ್ಟಿಂಗ್ ಹೆಚ್ಚಾದರೆ ಪಾಸಿಟಿವಿಟಿ ರೇಟ್ ಕಡಿಮೆಯಾಗುವ ಸಾಧ್ಯತೆ ಇದೆ.ಈ ನಿಟ್ಟಿನಲ್ಲಿ ಎಲ್ಲರೂ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಬೆಳ್ಳಾರೆ ಠಾಣಾ ಎಸೈ ಆಂಜನೇಯ ರೆಡ್ಡಿ ಮಾತನಾಡಿ,ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಉಪತಹಶೀಲ್ದಾರ್ ಮನೋಹರ ಮಾತನಾಡಿ,ಸೀಲ್‌ಡೌನ್ ಮಾಡಿರುವ ಪ್ರದೇಶಗಳಿಗೆ ಆಗಮನ,ನಿರ್ಗಮನವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದರು.
ನೋಡಲ್ ಅಧಿಕಾರಿಯಾಗಿರುವ ಶಿಕ್ಷಣಾಧಿಕಾರಿ ಲೋಕೇಶ್ ಮಾತನಾಡಿ,ಕೋವಿಡ್ ನಿರ್ಮೂಲನೆಗೆ ಮೊದಲ ಆದ್ಯತೆ. ಜನತೆ ಕೈಜೋಡಿಸಬೇಕು.ಅನಗತ್ಯ ಸಂಚಾರ ನಿಲ್ಲಿಸಬೇಕು.ಕೋವಿಡ್ ಸೋಂಕಿತರನ್ನು ಕೇರ್ ಸೆಂಟರ್‌ಗಳಿಗೆ ದಾಖಲಿಸಲು ಎಲ್ಲರೂ ಸಹಕಾರ ನೀಡಬೇಕು.ಅಗತ್ಯ ಸಮಯದಲ್ಲಿ ಶಿಕ್ಷಕರನ್ನು ಬಳಸಿಕೊಳ್ಳಲಾಗುವುದು ಎಂದರು.
ಸವಣೂರು ಸಿಎ ಬ್ಯಾಂಕ್ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ ಮಾತನಾಡಿ,ಈಗಾಗಲೇ ರೈತರ ಬೆಲೆ ವಿಮೆಗೆ ಜೂ.30 ಕೊನೆ ದಿನವಾಗಿದ್ದು,ಸೀಲ್‌ಡೌನ್ ಹಿನ್ನೆಲೆಯಲ್ಲಿ ಬೆಳೆ ವಿಮೆ ಅವಧಿಯನ್ನು ವಿಸ್ತರಿಸುವಂತೆ ವಿನಂತಿಸಿದರು.ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಾ.ಪಂ.ಇಓ ಹೇಳಿದರು.
ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಶೆಟ್ಟಿ ಮಾತನಾಡಿ,ಸವಣೂರು ಗ್ರಾ.ಪಂ.ವ್ಯಾಪ್ತಿಯನ್ನು ಜಿಲ್ಲಾಧಿಕಾರಿಗಳು ಸೀಲ್‌ಡೌನ್ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶವನ್ನು ನಾವು ಪಾಲನೆ ಮಾಡಬೇಕು.ಈ ಹಿನ್ನೆಲೆಯಲ್ಲಿ ಗ್ರಾ.ಪಂ.ನಲ್ಲಿ ಸಹಾಯವಾಣಿ ತೆರೆಯಲಾಗುವುದು ಎಂದರು.
ಸುಳ್ಯ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಮಾತನಾಡಿ,ಅಧಿಕಾರಿಗಳು ಜಾಗರೂಕರಾಗಿರುತ್ತಿದ್ದರೆ ಸೀಲ್‌ಡೌನ್ ನಂತಹ ಪರಿಸ್ಥಿತಿಯಾಗುತ್ತಿರಲಿಲ್ಲ.ಈ ಸಮಯದಲ್ಲಿ ದೈನಂದಿನ ಜೀವನ ನಿರ್ವಹಣೆಗಾಗಿ ಕೂಲಿ ಮಾಡುವ ಜನರಿಗೆ ವ್ಯವಸ್ಥೆಯಾಗಬೇಕು,ಸರಕಾರದಿಂದ ಕೋವಿಡ್ ವಾರಿಯರ್ಸ್ ಎಂದು ಗುರುತಿಸಿರುವ ಸರಕಾರಿ ನೌಕರರನ್ನು ಕರ್ತವ್ಯಕ್ಕೆ ಬಳಸಿಕೊಳ್ಳಬೇಕು.ಗ್ರಾ.ಪಂ.ಸದಸ್ಯರಿಗೆ, ಕಾರ್ಯಪಡೆ ಸದಸ್ಯರಿಗೆ ಏನಾದರೂ ತೊಂದರೆಯಾದರೆ ಯಾವುದೇ ಭದ್ರತೆ ಇಲ್ಲ.ಈ ಕುರಿತೂ ಗಮನಹರಿಸಬೇಕು ಎಂದರು.
ಒಂದು ವರ್ಷದ ಗೌರವಧನ ಕೋವಿಡ್ ಕಾರ್ಯಪಡೆಗೆ
ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ ಮಾತನಾಡಿ,ಗ್ರಾ.ಪಂ.ವ್ಯಾಪ್ತಿಯ ಸವಣೂರು, ಪಾಲ್ತಾಡಿ, ಪುಣ್ಚಪ್ಪಾಡಿ ಗ್ರಾಮಗಳಿಗೆ ಒಳಬರುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಬೇಕು.ತನ್ನ ಒಂದು ವರ್ಷದ ಗೌರವಧನವನ್ನು ಕೋವಿಡ್ ಕಾರ್ಯಪಡೆಗೆ ನೀಡುತ್ತೇನೆ ಎಂದರು.
ವೇದಿಕೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ,ತಾ.ಪಂ.ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಉಪಸ್ಥಿತರಿದ್ದರು.
ಗ್ರಾ.ಪಂ.ಸದಸ್ಯರಾದ ಗಿರಿಶಂಕರ ಸುಲಾಯ,ಅಬ್ದುಲ್ ರಝಾಕ್,ರಫೀಕ್ ಎಂ.ಎ,ಭರತ್ ರೈ ಪಾಲ್ತಾಡಿ, ಬಾಬು ಎನ್,ತಾರಾನಾಥ ಬೊಳಿಯಾಲ,ಸುಂದರಿ ಬಂಬಿಲ,ಚಂದ್ರಾವತಿ ಸುಣ್ಣಾಜೆ,ತೀರ್ಥರಾಮ ಕೆಡೆಂಜಿ,ಹರೀಶ್ ಕೆ.ಜಿ,ಸತೀಶ್ ಅಂಗಡಿಮೂಲೆ ,ಚೇತನಾ ,ಕಾರ್ಯಪಡೆ ಸದಸ್ಯರಾದ ಸುರೇಶ್ ರೈ ಸೂಡಿಮುಳ್ಳು, ಇಂದಿರಾ ಬಿ.ಕೆ ,ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು ಮೊದಲಾದವರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.
ಗ್ರಾ.ಪಂ.ಲೆಕ್ಕ ಸಹಾಯಕ ಎ.ಮನ್ಮಥ ಸ್ವಾಗತಿಸಿ ,ದಯಾನಂದ ಮಾಲೆತ್ತಾರು ವಂದಿಸಿದರು.ಪ್ರಮೋದ್ ಕುಮಾರ್ ರೈ ಸಹಕರಿಸಿದರು.