ಬೆಳ್ತಂಗಡಿ | ಶಾಸಕ ಹರೀಶ್ ಪೂಂಜಾರಿಂದ ಆಶಾ ಕಾರ್ಯಕರ್ತೆಯರಿಗೆ ‘ಗುಡ್ ನ್ಯೂಸ್’
ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ನಡೆಯುತ್ತಿರುವ ‘ಜನಾಧಿಕಾರ’ ಮತ್ತು ‘ಜನಸೇವೆಯ ಅನಾವರಣ’ ಕಾರ್ಯಕ್ರಮದ ಭಾಗವಾಗಿ ಜೂನ್.13ರಂದು ಬೆಳ್ತಂಗಡಿ ತಾಲೂಕಿನ ಕಾರ್ಯಕರ್ತೆಯರ ಸಮಸ್ಯೆಗಳಿಗೆ ಧ್ವನಿಯಾಗುವ
ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಅಧ್ಯಕ್ಷೆ ಭಾರತಿ ಹಾಗೂ ಕಾರ್ಯದರ್ಶಿ ರೇಣುಕಾ ಅವರು ಭಾಗವಹಿಸಿದ್ದರು. ಆಶಾ ಕಾರ್ಯಕರ್ತೆಯರ ಕಾರ್ಯವೈಖರಿ, ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ಈ ಕಾರ್ಯಕ್ರಮದ ಮೂಲಕ ಹಂಚಿಕೊಂಡರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಹರೀಶ್ ಪೂಂಜ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ತಾಲೂಕಿನ ಆಶಾ ಕಾರ್ಯಕರ್ತೆಯರ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕರ ಗಮನಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ತಾನು ಹಲವಾರು ಸಂದರ್ಭಗಳಲ್ಲಿ ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಧ್ವನಿಯಾಗುವ ಕೆಲಸವನ್ನು ಈ ಹಿಂದೆಯೂ ಮಾಡಿದ್ದೇನೆ ಹಾಗೂ ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ಕಿಟ್ ಒದಗಿಸುವ ಕಾರ್ಯವೂ ಇಲ್ಲಿ ನಡೆದಿತ್ತು ಮತ್ತು ವಿಧಾನ ಸಭೆಯಲ್ಲೂ ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಧ್ವನಿಯಾಗುವ ಪ್ರಯತ್ನವನ್ನು ತಾನು ಮಾಡಿದ್ದೇನೆ ಎಂದು ಹೇಳಿದರು.
ಹಾಗೆಯೇ ಈ ಕಾರ್ಯಕ್ರಮದ ಮೂಲಕ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಒಂದು ‘ಗುಡ್ ನ್ಯೂಸ್’ ನೀಡುತ್ತಿದ್ದೇನೆ ಎಂದು ಹೇಳಿದ ಶಾಸಕರು, ಆಶಾ ಕಾರ್ಯಕರ್ತೆಯರ ಫೀಲ್ಡ್ ವರ್ಕ್ ಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೀಘ್ರದಲ್ಲೇ ಆ್ಯಂಡ್ರಾಯ್ ಮೊಬೈಲನ್ನು ಶಾಸಕರ ಕಛೇರಿಯಿಂದ ಒದಗಿಸಲಾಗುತ್ತದೆ ಎಂದು ಘೋಷಿಸಿದರು.
ಶಾಸಕರ ಈ ಘೋಷಣೆಯು ಆಶಾ ಕಾರ್ಯಕರ್ತೆಯರಿಗೆ ನಿಜವಾಗಿಯೂ ತುಂಬಾನೇ ಸಹಾಯ ಮಾಡಬಲ್ಲುದು. ಶಾಸಕರ ಈ ರೀತಿಯ ಕಾರ್ಯಗಳು ಎಂದಿಗೂ ಜನಮನ್ನಣೆ ಪಡೆಯುತ್ತಲೇ ಇರುತ್ತದೆ.