ಬುಲೆಟ್ ಪ್ರಕಾಶ್ ನಿಲ್ಲಿಸಿ ಹೋಗಿದ್ದ ಬುಲೆಟ್ ಏರಿ ಹೊರಟ ಮಗ ರಕ್ಷಕ್ | ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ರಕ್ಷಕ್ ಹೀಗಿದ್ದಾರೆ ನೋಡಿ !!

ಬೆಂಗಳೂರು, ಜೂನ್ 14: ಹಾಸ್ಯ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಡೋದು ಪಕ್ಕಾ ಆಗಿದೆ. ಈಗಾಗಲೇ ಒಂದು ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡು ಬಂದಿರುವ ರಕ್ಷಕ್ ಮುಂದಿನ ಕೆಲಸಕ್ಕೆ ಸಜ್ಜಾಗ್ತಿದ್ದಾರೆ.

ಹಾಸ್ಯ ನಟ ಬುಲೆಟ್ ಪ್ರಕಾಶ್ ಹಾಸ್ಯ ಇಷ್ಟಪಡದವರು ಯಾರಿದ್ದಾರೆ ? ತನ್ನ ದೈತ್ಯ ದೇಹ, ತುಂಬಿದ ಆದರೆ ಎಕ್ಸ್ಪ್ರೆಶನ್ ಬೆಳಗಿಸಬಲ್ಲ ಮುಖ, ಇತರ ಹಾಸ್ಯ ನಟರೊಂದಿಗೆ ಮ್ಯಾಚ್ ಮಾಡಿಕೊಳ್ಳಬಲ್ಲ ಪರ್ಫೆಕ್ಟ್ ಟೈಮಿಂಗ್ ಮೂಲಕ ಹಾಸ್ಯಪ್ರಿಯರು ಮುಖದಲ್ಲಿ ನಗು ಮೂಡಿಸಿದವರು ಬುಲೆಟ್. ಇಂತಹ ಬುಲೆಟ್ ತೀರಿಕೊಂಡು ಹಲವು ತಿಂಗಳುಗಳೇ ಕಳೆದವು. ಇದೀಗ ಕನ್ನಡ ಚಿತ್ರ ಪ್ರಿಯರಿಗೆ ಒಂದು ಶುಭ ಸುದ್ದಿ ಸಿಕ್ಕಿದೆ. ಬುಲೆಟ್ ಪ್ರಕಾಶ್ ಮಗ ರಕ್ಷಕ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ದೈತ್ಯ ದೇಹದ ಬುಲೆಟ್ ಪ್ರಕಾಶ್ ಮಗ ಹೇಗಿರಬಹುದು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ. ಇಲ್ಲಿದ್ದಾನೆ ನಮ್ಮ ರಕ್ಷಕ್ ಬುಲೆಟ್ ಪ್ರಕಾಶ್ !

ಗುರುಶಿಷ್ಯರು ಹಿರಿಯನಟ ದ್ವಾರಕೀಶ್ ನಟಿಸಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ದಾಖಲಾಗಿರುವ ಸೂಪರ್ ಹಿಟ್ ಸಿನಿಮಾ. ಈ ಟೈಟಲ್‍ನಲ್ಲಿ ಶರಣ್ ಮತ್ತು ತಂಡದವರು ಹೊಸ ಕಥೆ ಹೇಳು ಹೊರಟಿದ್ದಾರೆ. ಜಡೇಶ್ ಗುರುಶಿಷ್ಯರು ಕಥೆಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ತರುಣಿ ಸುಧೀರ್ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಶರಣ್ ಶಿಷ್ಯನ ಪಾತ್ರ ಮಾಡ್ತಿದ್ದಾರೆ ರಕ್ಷಕ್. ನೆನಪಿರಲಿ ಪ್ರೇಮ್ ಪುತ್ರ ಏಕಾಂತ್ ಕೂಡ ಗುರುಶಿಷ್ಯರು ಸಿನಿಮಾಗಾಗಿ ಬಣ್ಣ ಹಚ್ಚಿದ್ದಾರೆ. ಇದಲ್ಲದೆ ಬಹಳಷ್ಟು ಕಲಾವಿದರು ಮಕ್ಕಳು ಗುರುಶಿಷ್ಯರು ಸಿನಿಮಾದಲ್ಲಿ ನಟಿಸಿದ್ದಾರೆ ಅನ್ನೊ ಮಾಹಿತಿ ಸಿಕ್ಕಿದೆ.

ಯಾವ ಯಾವ ಸ್ಟಾರ್ ಮಕ್ಕಳು ಯಾವ ಪಾತ್ರ ಮಾಡುತ್ತಿದ್ದಾರೆ ಅನ್ನೋದು ಈ ತಿಂಗಳ ಅಂತ್ಯದಲ್ಲಿ ಚಿತ್ರತಂಡ ಹೇಳಲಿದೆ. ಮಗನನ್ನ ಹೀರೋ ಮಾಡಬೇಕು ಅಂತ ಬುಲೆಟ್ ಪ್ರಕಾಶ್ ಬಹಳ ಯೋಚನೆ ಮಾಡಿದ್ದರು. ಮಗ ತನ್ನಂತೆ ದಡೂತಿ ಆಗಬಾರದು ಎಂಬ ಕಾಳಜಿ ವಹಿಸಿದ್ದರು ಬುಲೆಟ್. ಅದರಂತೆ ಮಗನನ್ನು ಬೆಳೆಸಿದ್ದಾರೆ. ಫೈಟ್, ಡ್ಯಾನ್ಸ್, ಜಿಮ್ ಅಂತ ಆಗಲೇ ತಯಾರಿ ಆರಂಭಿಸಿದ್ದರು. ಆದರೆ ಮಗ ಬಣ್ಣ ಹಚ್ಚುವ ಮೊದಲೇ ಅನಾರೋಗ್ಯದಿಂದ ಬುಲೆಟ್ ಪ್ರಕಾಶ್ ನಿಧನರಾಗಿದ್ದಾರೆ. ಅಪ್ಪನ ಆಸೆಯಂತೆ ಮತ್ತು ಬುಲೆಟ್ ಸ್ನೇಹಿತರ ಮಾರ್ಗದರ್ಶನದಂತೆ ಮೊದಲ ಸಿನಿಮಾಗೆ ರಕ್ಷಕ್ ಬಣ್ಣ ಹಚ್ಚಿದ್ದಾರೆ. ಮುಂದಿನ ತಿಂಗಳು ಗುರುಶಿಷ್ಯರು ಸಿನಿಮಾ ಮತ್ತೊಂದು ಶೆಡ್ಯೂಲ್ ಪ್ಲಾನ್ ಆಗಿದೆ. ಅಪ್ಪನಂತೆ ಮಗ ಕೂಡಾ ಸಿನಿ ಅಡ್ಡಾದಲ್ಲಿ ಮಿಂಚುತ್ತಾನಾ ಎಂಬುದನ್ನು ಕಾದು ನೋಡಬೇಕಾಗಿದೆ.

Leave A Reply

Your email address will not be published.