ಶ್ರೀಲಂಕಾದಿಂದ ಭಾರತಕ್ಕೆ ಅಕ್ರಮವಾಗಿ‌ ವಲಸೆ 38 ಮಂದಿ ಪೊಲೀಸ್ ವಶಕ್ಕೆ | ಭಾರತದಿಂದ ಕೆನಡಾಕ್ಕೆ ಹೋಗುವ ಪ್ಲಾನ್ | ಒಬ್ಬೊಬ್ಬರಿಂದ 10 ಲಕ್ಷ ಪಡೆದುಕೊಂಡಿದ್ದ ಏಜೆಂಟ್?

ಶ್ರೀಲಂಕಾದಿಂದ ಅಕ್ರಮವಾಗಿ ಭಾರತಕ್ಕೆ ವಲಸೆ ಬಂದಿರುವ 38 ಮಂದಿ ಹಾಗೂ ಮಂಗಳೂರಿನಲ್ಲಿ ಅವರಿಗೆ ಆಶ್ರಯ ನೀಡಿದ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಲವೊಂದನ್ನು ಬೇಧಿಸಿದ್ದಾರೆ.

ಏಜೆಂಟ್‌ಗಳ ಮೂಲಕ ಶ್ರೀಲಂಕಾದಿಂದ ತಮಿಳುನಾಡಿಗೆ ಬಂದು ಅಲ್ಲಿಂದ ಬೆಂಗಳೂರಿಗೆ, ಬಳಿಕ ಮಂಗಳೂರಿಗೆ ಬಂದಿರುವ ಇವರು ಕೆನಡಕ್ಕೆ ಹೋಗುವ ಯೋಜನೆ ಹಾಕಿದ್ದರು ಎನ್ನಲಾಗಿದೆ.

ಶ್ರೀಲಂಕಾದ ಏಜೆಂಟ್‌ ಇವರಿಗೆ ಕೆನಡಾದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಪ್ರತಿಯೊಬ್ಬರಿಂದ 10 ಲಕ್ಷ ರೂ.ವರೆಗೆ ಹಣ ಪಡೆದಿರುವ ಮಾಹಿತಿ ಲಭಿಸಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಎನ್‌. ಶಶಿ ಕುಮಾರ್‌ ತಿಳಿಸಿದ್ದಾರೆ.

ಮಾ. 17ರಂದು ಶ್ರೀಲಂಕಾದಿಂದ ದೋಣಿಯಲ್ಲಿ ಇವರನ್ನು ತಮಿಳುನಾಡಿನ ತೂತುಕುಡಿಗೆ ಕಳುಹಿಸಿಕೊಡಲಾಗಿತ್ತು. ಅಲ್ಲಿಂದ ಬಸ್‌ ಪ್ರಯಾಣ ಮಾಡಿ ಮಧುರೈ, ಸೇಲಂ ಮೂಲಕ ಬೆಂಗಳೂರಿಗೆ ಕರೆದೊಯ್ಯಲಾಯಿತು. ಅಲ್ಲಿ ಸಣ್ಣ ಗುಂಪು ಮಾಡಿ ಒಂದೊಂದೇ ಗುಂಪನ್ನು ಮಂಗಳೂರಿಗೆ ಕಳುಹಿಸಲಾಗಿತ್ತು. ನಗರದ 2 ಲಾಡ್ಜ್ ಗಳು ಮತ್ತು ಒಂದು ಖಾಸಗಿ ಮನೆ ಯಲ್ಲಿ ಸುಮಾರು ಒಂದೂವರೆ ತಿಂಗಳು ಆಶ್ರಯ ನೀಡಲಾಗಿತ್ತು.

ಮಾನವ ಕಳ್ಳಸಾಗಣೆ ಪ್ರಕರಣ
ಇದು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಗಂಭೀರ ಪ್ರಕರಣವಾಗಿದ್ದು, ಮಾನವ ಕಳ್ಳ ಸಾಗಾಟವೂ ಹೌದು.

ವಶವಾಗಿರುವವರಲ್ಲಿ ಹೆಚ್ಚಿನವರು ಉತ್ತರ ಶ್ರೀಲಂಕಾ ಭಾಗದವರು ಎಂಬ ಮಾಹಿತಿ ಲಭಿಸಿದೆ. ಇವರ ವಿರುದ್ಧ ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ 103/2021 ಕಲಂ 120 (ಬಿ), 370, 420 ಐಪಿಸಿ, ವಿದೇಶೀ ಕಾಯಿದೆ 1964ರ ಸೆಕ್ಷನ್‌ 14 ಮತ್ತು ಪಾಸ್‌ಪೋರ್ಟ್‌ ಕಾಯಿದೆ 1967ರ ಸೆಕ್ಷನ್‌ 12(1)(ಎ)ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

Leave A Reply

Your email address will not be published.