ಪಾಲ್ತಾಡಿ ಗ್ರಾಮದ ಕುಂಜಾಡಿಯಲ್ಲಿ ನಳನಳಿಸುತ್ತಿದೆ ನೈಸರ್ಗಿಕ ಆಕ್ಸಿಜನ್ ಪ್ಲಾಂಟ್ | ಪದ್ಮಿನಿ ಅಶ್ವತ್ಥವನದಲ್ಲಿದೆ ಸಹಸ್ರ ಕೋಟಿ ಮೌಲ್ಯದ ಆಮ್ಲಜನಕ ನೀಡೋ ವೃಕ್ಷಗಳು
ಇಂದು ಕೋವಿಡ್ ಸಂಕಷ್ಟ ಕಾಲದಲ್ಲಿ ಇಡೀ ದೇಶದಲ್ಲಿ ಸದ್ದು ಮಾಡಿದ್ದು ಆಮ್ಲಜನಕ ಕೊರತೆಯ ಸುದ್ದಿ.ಇಂತಹ ವಿಪ್ಲವಗಳನ್ನು ಎದುರಿಸುವ ಬದಲು ಪರಿಸರ ಸಂರಕ್ಷಣೆ,ಆಮ್ಲಜನಕ ಉತ್ಪಾದಿಸುವ ಅಶ್ವತ್ಥಗಿಡಗಳನ್ನು ಬೆಳೆಸುವುದು ಸೂಕ್ತ ಎಂಬುದು ಹಿಂದಿನಿಂದಲೂ ಹೇಳುತ್ತಿದ್ದ ಪಾಠ.
ಇಲ್ಲೊಬ್ಬರು ಉಪನ್ಯಾಸಕರು ಪಾಠವಲ್ಲ ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ.
ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಹಾಗೂ ಪರಿಸಾರಸಕ್ತ ಉಪನ್ಯಾಸಕ ಡಾ.ಎಂ.ಕೆ.ಶ್ರೀಶ ಕುಮಾರ್ ಅವರೇ ಭೂಮಿ ಖರೀದಿಸಿ ಅಶ್ವತ್ಥಗಿಡ ನೆಟ್ಟು ಬೆಳೆಸಿದವರು.
ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಕುಂಜಾಡಿಯಲ್ಲಿ ಪದ್ಮಿನಿ ಅಶ್ವತ್ಥವನದಲ್ಲಿ ಅಶ್ವತ್ಥ ಗಿಡಗಳು ನಳನಳಿಸುತ್ತಿದೆ.ಜತೆಗೆ ಇತರ ಗಿಡಗಳನ್ನು ಬೆಳೆಸಿದ್ದಾರೆ.
ಕುಂಜಾಡಿಯಲ್ಲಿ ಒಂದು ಎಕರೆ ಜಾಗ ಖರೀದಿಸಿ ಜಾಗದ ತುಂಬೆಲ್ಲಾ ಅಶ್ವತ್ಥ ಗಿಡ ನೆಟ್ಟಿದ್ದಾರೆ.
ಅಶ್ವತ್ಥಮರ ಬೆಳೆದು ವಿಶಾಲವಾಗಿ ಹರಡುವುದರಿಂದ ಪೂರ್ವಯೋಜಿತವಾಗಿ ಸುರಕ್ಷಿತ ಅಂತರದಲ್ಲಿ ಗಿಡ ನೆಟ್ಟಿದ್ದಾರೆ.
ಇಲ್ಲಿನ ಪದ್ಮಿನಿ ಅಶ್ವತ್ಥವನದಲ್ಲಿ ಅಶ್ವತ್ಥ ಗಿಡವಲ್ಲದೆ ಪಚ್ಚೆ ಕರ್ಪೂರ, ನಾಗಸಂಪಿಗೆ, ನಾಗ ಲಿಂಗ,ಗೋಳಿ,ನೆಲ್ಲಿ ಸೇರಿದಂತೆ ಸುಮಾರು 130 ಗಿಡಗಳನ್ನು ಬೆಳೆಸಿದ್ದಾರೆ.
ಆಮ್ಲಜನಕ ಉತ್ಪಾದನೆಯಲ್ಲಿಬ ಅಶ್ವತ್ಥ ಗಿಡಕ್ಕೆ ಅಗ್ರಸ್ಥಾನವಿದೆ.ಗಿಡವೊಂದು
ದಿನಕ್ಕೆ ಸುಮಾರು ಒಂದು ಸಾವಿರ ಜನರಿಗೆ ಬೇಕಾದ ಆಮ್ಲಜನಕ ಕೊಡಬಲ್ಲ ಸಾಮರ್ಥ್ಯ ಹೊಂದಿದೆ. ಈಗಿನ ಕೋವಿಡ್ ಸಂಕಷ್ಠ ಕಾಲದಲ್ಲಿ ಆಕ್ಸಿಜನ್ ಬೆಲೆ ಏರಿದೆ.ಇಂತಹ ಅಶ್ವತ್ಥವನದಲ್ಲಿ ಸಹಸ್ರ ಕೋಟಿ ಮೌಲ್ಯದ ಆಮ್ಲಜನಕ ಉತ್ಪತ್ತಿಯಾಗುತ್ತದೆ.ಇದು ಈ ಭಾಗದ ಜನತೆಗೆ ವರದಾನವಾಗಿದೆ.
ಡಾ.ಶ್ರೀಶ ಕುಮಾರ್ ಅವರು ಈವರೆಗೆ ಹಲವೆಡೆ ಪರಿಸರ ಜಾಗೃತಿ ಉಪನ್ಯಾಸ ನೀಡಿದ್ದಾರೆ.ಹಲವು ಗಿಡಗಳನ್ನು ಬೆಳೆಸಿದ್ದಾರೆ.
ನುಡಿದಂತೆ ನಡೆದರು
ಡಾ.ಎಂ.ಕೆ.ಶ್ರೀಶ ಕುಮಾರ್ ಅವರು ಪಾಲ್ತಾಡಿ ಗ್ರಾಮದ ಮಂಜುನಾಥನಗರದಲ್ಲಿ ಅಶ್ವತ್ಥೋಪನಯನ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ,ಒಂದು ಎಕರೆ ಜಾಗ ಸ್ಥಳೀಯವಾಗಿ ದೊರೆತರೆ ಅಶ್ವತ್ಥವನ ನಿರ್ಮಿಸುವುದಾಗಿ ಹೇಳಿದ್ದರು.
ಇದರಂತೆ ಪಾಲ್ತಾಡಿ ಗ್ರಾಮವಿಕಾಸ ಸಮಿತಿಯ ಅಧ್ಯಕ್ಷರಾಗಿದ್ದ ,ಪ್ರಸ್ತುತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗ್ರಾಮಾಂತರ ಸಂಘಚಾಲಕ ಸುಧಾಕರ ರೈ ಕುಂಜಾಡಿ ಅವರು ಶ್ರೀಶ ಕುಮಾರ್ ಅವರಿಗೆ ಜಾಗ ನೀಡಲು ಮುಂದಾದರು.
ನಂತರ ಜಾಗ ಖರೀದಿಸಿ ಅಶ್ವತ್ಥವನ ನಿರ್ಮಿಸಿ ನುಡಿದಂತೆ ನಡೆದಿದ್ದಾರೆ.
ಮೂರು ವರ್ಷಗಳ ಹಿಂದೆ ನೆಟ್ಟ ಗಿಡಗಳು ಈಗ ಸಾಕಷ್ಟು ಬೆಳೆದಿದೆ.ಬೇಸಿಗೆಯಲ್ಲಿ ಪೈಪು ಮೂಲಕ ಗಿಡಗಳಿಗೆ ನೀರುಣಿಸಿ ಪೋಷಿಸಿದ್ದಾರೆ.ಕೆಲವೊಂದು ಬಾರಿ ಟ್ಯಾಂಕರ್‌ನಲ್ಲೂ ನೀರು ತರಿಸಿ ಗಿಡಗಳಿಗೆ ಉಣಿಸಲಾಗಿದೆ.ಮುಂದಿನ ಐದರಿಂದ ಆರು ವರ್ಷಗಳಲ್ಲಿ ಕುಂಜಾಡಿಯ ಪದ್ಮನಿ ಅಶ್ವತ್ಥವನ ಅತಿ ಹೆಚ್ಚು ಆಮ್ಲಜನಕ ಇರುವ ತಾಣವಾಗಲಿದೆ ಎನ್ನುತ್ತಾರೆ ಡಾ| ಶ್ರೀಶ ಕುಮಾರ್.