3 ಮರಿಗಳಿಗೆ ಜನ್ಮ ನೀಡಿದ ಪಿಲಿಕುಳದ ಹುಲಿ ‘ರಾಣಿ’..!

10 ವರ್ಷ ಪ್ರಾಯದ ರಾಣಿ ಹೆಸರಿನ ಹುಲಿ ಮಂಗಳೂರು ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿದ್ದು, ಈ ಹುಲಿ 3 ಮರಿಗಳಿಗೆ ಜನ್ಮ ನೀಡಿದೆ ಎಂದು ತಿಳಿದುಬಂದಿದೆ. ಇದೀಗ ಪಿಲಿಕುಳದಲ್ಲಿ ಹುಲಿಗಳ ಸಂಖ್ಯೆ 13ಕ್ಕೆ ಏರಿದೆ.

ರಾಣಿಯು 2019ರಲ್ಲಿ ರೇವಾ, ಸುಧಾ, ಜಯರಾಮ, ಸಂಜಯ ಹಾಗೂ ವಿಜಯ ಎಂಬ ಐದು ಮರಿಗಳಿಗೆ ಜನ್ಮ ನೀಡಿತ್ತು. ಅವುಗಳು ಬೆಳೆದಿದ್ದು, ಇವುಗಳಿಗೆ ಪ್ರತ್ಯೇಕವಾದ ವಾಸದ ಮನೆಯನ್ನು ಅಬುಧಾಬಿಯ ರಾಮದಾಸ ಕಾಮತ್ ದಂಪತಿ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಸಹಕರಿಸಿದ್ದಾರೆ.

ಮರಿಗಳ ಜನನದ ಬಗ್ಗೆ ಉದ್ಯಾನವನದ ನಿರ್ದೇಶಕ ಎಚ್.ಜೆ. ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದ್ದು, ಮರಿಗಳು ಆರೋಗ್ಯವಾಗಿದ್ದು, 16 ದಿನಗಳಲ್ಲಿ ಕಣ್ಣು ತೆರೆಯಲಿವೆ ಎಂದು ಹೇಳಿದ್ದಾರೆ. ಕೊರೋನ ಅನ್‌ಲಾಕ್ ಬಳಿಕ ಚೆನ್ನೈನ ವಂಡಲೂರು ಮೃಗಾಲಯದಿಂದ ಬಿಳಿ ಹುಲಿಯನ್ನು ತರಿಸಲಾಗುವುದು. ಪ್ರಾಣಿ ವಿನಿಮಯದಲ್ಲಿ ನಂದನಕಾನನ್, ಸೂರತ್ ಮತ್ತು ಹೈದರಾಬಾದ್ ಮೃಗಾಲಯದಿಂದ ಕೆಲವು ಪ್ರಾಣಿ ಪಕ್ಷಿಗಳನ್ನು ತರುವ ಬಗ್ಗೆ ಕಾರ್ಯಕ್ರಮ ಇದೆ ಎಂದು ಎಚ್.ಜೆ. ಭಂಡಾರಿ ತಿಳಿಸಿದ್ದಾರೆ.

ಇದರ ನಡುವೆಯೇ ಉಷ್ಟ್ರ ಪಕ್ಷಿಯ ವರ್ಗಕ್ಕೆ ಸೇರಿದ ಬಿಳಿ ರಿಯಾವು ಮೊಟ್ಟೆಗಳನ್ನಿಟ್ಟಿದ್ದು ಅವುಗಳಿಗೆ ಕಾವು ಕೊಡಲಾಗುತ್ತಿದೆ. ಅದರಲ್ಲಿ ಈಗಾಗಲೇ ಒಂದು ಬಿಳಿ ರಿಯಾ ಜನ್ಮ ತಾಳಿದೆ ಎಂಬ ಮಾಹಿತಿ ತಿಳಿದುಬಂದಿದೆ.

Leave A Reply

Your email address will not be published.