ಮಾಸ್ಕ್ ಸರಿಯಾಗಿ ಧರಿಸದ ಕಾರಣಕ್ಕೆ ಹಲ್ಲೆ | ಬೀದಿ ರಂಪ ಮಾಡಿ ಪೊಲೀಸರ ಅತಿಥಿಯಾದ ಯುವತಿ

ಮಾಸ್ಕ್ ಸರಿಯಾಗಿ ಧರಿಸದ ಯುವತಿ ಮೇಲೆ ಮತ್ತೊಬ್ಬ ಯುವತಿ ಹಲ್ಲೆ ನಡೆಸಿರುವ ಘಟನೆ ಬೆಳಿಗ್ಗೆ ಬೆಂಗಳೂರಿನ ಸದಾಶಿವನಗರದಲ್ಲಿ ನಡೆದಿದೆ.

 

ಮೂಗಿನ ಕೆಳಗೆ ಮಾಸ್ಕ್ ಹಾಕಲಾಗಿದೆ ಎಂಬ ಕಾರಣಕ್ಕೆ ಅದ್ವೈತ ಅರುಣ್ ಕುಮಾರ್ ಎಂಬ ಯುವತಿ ಮತ್ತೊಬ್ಬ ಯುವತಿಯ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾಳೆ. ಅದ್ವೈತ ತನ್ನ ಎರಡು ನಾಯಿಗಳೊಂದಿಗೆ ವಾಕಿಂಗ್ ಹೋಗುತ್ತಿದ್ದಾಗ ಎದುರಿನಿಂದ ಯುವತಿ ಬರುತ್ತಿದ್ದರು. ಮೂಗಿನ ಕೆಳಗೆ ಮಾಸ್ಕ್ ಹಾಕಿದ ಹಿನ್ನೆಲೆಯಲ್ಲಿ ಏಕಾಏಕಿ ಅದ್ವೈತ ದೊಣ್ಣೆಯಿಂದ ಹಲ್ಲೆ ಮಾಡಿದ್ದಾಳೆ.

ಮಾಸ್ಕ್ ಸರಿಯಾಗಿ ಹಾಕದಿದ್ದರೆ ಕೇಳಲು ಪೊಲೀಸರಿದ್ದಾರೆ. ನನ್ನನ್ನು ಹೊಡೆಯುವುದಕ್ಕೆ ನೀವು ಯಾರು ಎಂದು ಹಲ್ಲೆಗೊಳಗಾದ ಯುವತಿ ಆಕ್ರೋಶ ಹೊರಹಾಕಿದ್ದಾರೆ. ಹಾಗೆಯೇ ಇದನ್ನು ಪ್ರಶ್ನಿಸಲು ಮುಂದಾದ ಸಾರ್ವಜನಿಕರ ಮೇಲೂ ಹಲ್ಲೆ ಮಾಡಿ ಅದ್ವೈತ ಆಕ್ರೋಶ ವ್ಯಕ್ತಪಡಿಸಿದ್ದಾಳೆ ಎಂದು ಆರೋಪಿಸಲಾಗಿದೆ.

ದೊಣ್ಣೆಯಿಂದ ಹೊಡೆದಿದ್ದರಿಂದ ಸಿಟ್ಟಿಗೆದ್ದ ಮಹಿಳೆ ಸದಾಶಿವ ನಗರದ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ ದೂರು ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ, ಎರಡು ನಾಯಿ ಸಮೇತ ಹಲ್ಲೆ ಮಾಡಿದ ಅದ್ವೈತರನ್ನು ಹೊಯ್ಸಳ ವಾಹನದಲ್ಲಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಅಲ್ಲದೇ, ಹಲ್ಲೆ ಮಾಡಿದ ಯುವತಿ ಅದ್ವೈತ ತಾನು ಐಪಿಎಸ್ ಅಧಿಕಾರಿ ಎಂದು ಹೇಳುತ್ತಿದ್ದು, ಈ ಕುರಿತು ಸೂಕ್ತ ತನಿಖೆ ಮಾಡುವಂತೆ ಸ್ಥಳದಲ್ಲಿದ್ದ ಹಿರಿಯ ನಾಗರಿಕರೊಬ್ಬರು ಆಗ್ರಹಿಸಿದ್ದಾರೆ.

ಹೀಗೆ ಹಲ್ಲೆ ಮಾಡಿದ ಯುವತಿ ಬೆಳ್ಳಂಬೆಳಗ್ಗೆ ಪೊಲೀಸರ ಅತಿಥಿಯಾಗಿದ್ದಾರೆ. ಹಾಗೂ ಹಲ್ಲೆಗೊಳಗಾದ ಯುವತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

Leave A Reply

Your email address will not be published.