ಮೀನುಗಾರನ ಅದೃಷ್ಟವನ್ನೇ ಬದಲಾಯಿಸಿದ ಈ ಮೀನು | ಇಲ್ಲಿ ಕೇಳಿ ಮೀನಿನ ಕಥೆ
ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನಾವು ಕೇಳಿದ್ದೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಮೀನುಗಾರನೊಬ್ಬನ ಬದುಕಲ್ಲಿ ನಡೆದಿದ್ದು ಎಲ್ಲರನ್ನೂ ಅಚ್ಚರಿಗೆ ನೂಕಿದೆ.
ಹೌದು. ಪಾಕಿಸ್ತಾನ ಮೂಲದ ಮೀನುಗಾರನೊಬ್ಬ ತನ್ನ ಬಲೆಗೆ ಬಿದ್ದ 48 ಕೆ.ಜಿ. ತೂಕದ ಅಟ್ಲಾಂಟಿಕ್ ಕ್ರೋಕರ್ ಎಂಬ ಹೆಸರಿನ ವಿರಾಳಾತಿವಿರಳ ಮೀನನ್ನು ಬರೋಬ್ಬರಿ 72 ಲಕ್ಷ ರೂಪಾಯಿ (46,706 ಡಾಲರ್) ಗೆ ಮಾರಾಟ ಮಾಡಿದ್ದಾನೆ. ಪಾಕಿಸ್ತಾನದಲ್ಲೇ ಅತ್ಯಂತ ದುಬಾರಿ ಸಮುದ್ರ ಆಹಾರ
ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
ಸಾಜಿದ್ ಹಜಿ ಅಬಾಲ್ಕರ್ ಎಂಬ ಮೀನುಗಾರನ ಬಲೆಗೆ ಬಲೂಚಿಸ್ತಾನ ಪ್ರಾಂತ್ಯದ ಗ್ವಾದಾರ್ ಕರಾವಳಿ ಪ್ರದೇಶದಲ್ಲಿ ಈ ಮೀನು ಬಿದ್ದಿದೆ. ಮೀನಿನ ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 86 ಲಕ್ಷಕ್ಕೆ ಮೀನು ಮಾರಾಟವಾಯಿತು. ಆದರೆ, ಸಾಂಪ್ರದಾಯಿಕ ರಿಯಾಯಿತಿ ಆಧಾರದ ಮೇಲೆ 72 ಲಕ್ಷ ರೂ.ಗೆ ಮೀನನ್ನು ನೀಡಲಾಯಿತು ಎಂದು ತಿಳಿದುಬಂದಿದೆ.
ಯೂರೋಪ್ ಮತ್ತು ಚೀನಾದಲ್ಲಿ ಅಟ್ಲಾಂಟಿಕ್ ಕ್ರೋಕರ್ ಮೀನಿನ ಮಾಂಸಕ್ಕೆ ಭಾರಿ ಬೇಡಿಕೆ ಇದೆ ಮತ್ತು ಅದರ ಚರ್ಮ ಮತ್ತು ಮೂಳೆಗಳನ್ನು ವೈದ್ಯಕೀಯ ವಿಜ್ಞಾನದಲ್ಲಿ ಬಳಸಿಕೊಳ್ಳಲಾಗುತ್ತದೆ.
ಇನ್ನು ಅಟ್ಲಾಂಟಿಕ್ ಕ್ರೋಕರ್ ಮೀನು ತನ್ನ ಮಾಂಸದಿಂದಲೇ ಬಹಳ ಪ್ರಸಿದ್ಧಿ. ಏಕೆಂದರೆ ಅದರ ಮಾಂಸ ತುಂಬಾ ದುಬಾರಿ. ಅಲ್ಲದೆ, ಇದು ಬಹುಪಯೋಗಿ ಆಗಿರುವುದರಿಂದಲೇ ಇಷ್ಟು ದುಬಾರಿ ಬೆಲೆಗೆ ಮಾರಾಟವಾಗಿದೆ.
ಗ್ವಾದರ್‌ನ ಮೀನುಗಾರಿಕೆ ಉಪನಿರ್ದೇಶಕ ಅಹ್ಮದ್ ನದೀಮ್ ಈ ಬಗ್ಗೆ ಮಾತನಾಡಿ, ಮೀನುಗಳನ್ನು ಇಷ್ಟು ಹೆಚ್ಚಿನ ಬೆಲೆಗೆ ಮಾರಾಟವಾಗುವುದನ್ನು ನೋಡಿಯೇ ಇಲ್ಲ ಎಂದು ಹೇಳಿದರು.
ಇದೇ ರೀತಿಯ ಕ್ರೋಕರ್ ಮೀನನ್ನು ಕಳೆದ ವಾರವು ಗ್ವಾದಾರ್‌ನಲ್ಲಿ ಸೆರೆಹಿಡಿಯಲಾಗಿತ್ತು. ಈ ವೇಳೆ ಆ ಮೀನು 7.8 ಲಕ್ಷಕ್ಕೆ ಮಾರಾಟವಾಗಿತ್ತು. ಅಟ್ಲಾಂಟಿಕ್ ಕ್ರೋಕರ್ ಸಾಮಾನ್ಯವಾಗಿ 1.2 ಕೆ.ಜಿ ತೂಕವಿರುತ್ತದೆ. ಸಾಮಾನ್ಯವಾಗಿ ವಾಣಿಜ್ಯಕವಾಗಿ ಹಿಡಿಯುವ ಭಾರವಾದ ಮೀನು ಇದಾಗಿದೆ.
ಏನೇ ಆಗಲಿ ಈ ಮೀನು ತನ್ನ ಬಲೆಗೆ ಬಿದ್ದಿದ್ದರಿಂದ ಮೀನುಗಾರನ ಅದೃಷ್ಟವೇ ಬದಲಾಗಿದೆ ಹಾಗೂ ಅವನಿಗೆ ಇದರಿಂದಾಗಿ ಹೆಚ್ಚಿನ ಜನಪ್ರಿಯತೆಯೂ ದೊರೆತಂತಾಗಿದೆ.