ಆಯುರ್ವೇದ ಔಷಧಿಯಿಂದ 10 ನಿಮಿಷದಲ್ಲಿ ಕೊರೋನದಿಂದ ಗುಣಮುಖನಾದೆ ಎಂದು ಹೇಳಿಕೊಂಡಿದ್ದವ ಆಸ್ಪತ್ರೆಯಲ್ಲಿ ಸಾವು
ಪವಾಡಸದೃಶವಾದ ಆಯುರ್ವೇದ ಔಷಧಿಯನ್ನು ಸೇವಿಸಿ ಸುಮಾರು 10 ನಿಮಿಷಗಳ ನಂತರ ಕೊರೊನಾದಿಂದ ಗುಣಮುಖನಾದೆ ಎಂದು ಹೇಳಿಕೊಂಡಿದ್ದ ವ್ಯಕ್ತಿಯೊಬ್ಬರು ಆಂಧ್ರಪ್ರದೇಶದ ನೆಲ್ಲೋರಿನಲ್ಲಿ ನಿಧನರಾಗಿದ್ದಾರೆ. ನಿವೃತ್ತ ಮುಖ್ಯೋಪಾಧ್ಯಾಯ ಎನ್ ಕೋಟಯ್ಯ ಮೃತರು ಎಂದು ತಿಳಿದುಬಂದಿದೆ.
ನೆಲ್ಲೋರಿನ ಕೃಷ್ಣಪಟ್ಟಣಂನಲ್ಲಿ ಬೊನಿಗಿ ಆನಂದಯ್ಯ ಎಂಬ ಆಯುರ್ವೇದ ವೈದ್ಯರು ನೀಡಿದ ‘ಹರ್ಬಲ್ ಐ ಡ್ರಾಪ್’ ಪಡೆದ ಮೇಲೆ ತಾವು ಥಟ್ಟನೆ ಕೋವಿಡ್‌ನಿಂದ ಗುಣಮುಖರಾಗಿದ್ದಾಗಿ ಕೆಲವು ದಿನಗಳ ಹಿಂದೆ ವಿಡಿಯೋ ಮಾಡಿ ಶೇರ್ ಮಾಡಿದ್ದರು. ವೈರಲ್ ಆದ ಈ ವಿಡಿಯೋದಿಂದ ಪ್ರಭಾವಿತರಾಗಿ ಸಾವಿರಾರು ಜನರು ಈ ಪವಾಡಸದೃಶ ಔಷಧಿಗಾಗಿ ಕೃಷ್ಣಪಟ್ಟಣಂನಲ್ಲಿ ಸಾಲುಗಟ್ಟಿ ನಿಲ್ಲುತ್ತಾರೆ.
“ಮೇ 28 ರ ರಾತ್ರಿ ಕೋಟಯ್ಯ ಅವರ ಆಕ್ಸಿಜನ್ ಮಟ್ಟ ಇಳಿದ ಕಾರಣದಿಂದ ನೆಲ್ಲೋರು ಸರ್ಕಾರಿ ಜನರಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರಿಗೆ ಹಲವು ಇತರ ಆರೋಗ್ಯ ಸಮಸ್ಯೆಗಳೂ ಇದ್ದವು. ಇಂದು ಮುಂಜಾನೆ ಮೃತಪಟ್ಟರು” ಎಂದು ಜನರಲ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಸುಧಾಕರ್ ರೆಡ್ಡಿ ತಿಳಿಸಿದ್ದಾರೆ.
ಮತ್ತೊಂದೆಡೆ, ಆನಂದಯ್ಯ ಅವರ ತಂಡದ ಮೂವರು ಸದಸ್ಯರಿಗೆ ರಾಪಿಡ್ ಆ್ಯಂಟಿಜನ್ ಟೆಸ್ಟ್‌ನಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಸುಮಾರು 20 ಗ್ರಾಮಸ್ಥರು ಕೊರೊನಾ ರೋಗಲಕ್ಷಣಗಳನ್ನು ಹೊಂದಿದ್ದು, ಅವರ ಸ್ಯಾಂಪಲ್ ಗಳನ್ನು ಆರ್‌ಟಿಪಿಸಿಆರ್ ಪರೀಕ್ಷೆಗೆ ಕಳುಹಿಸಲಾಗಿದೆ
ಎನ್ನಲಾಗಿದೆ.
ಆಂಧ್ರಪ್ರದೇಶ ಸಿಎಂ ವೈ.ಎಸ್.ಜಗಮೋಹನ್ ರೆಡ್ಡಿ ಅವರು ಸ್ಥಳೀಯವಾದ ಆಯುರ್ವೇದಿಕ್ ಔಷಧಿಗೆ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಆಯುರ್ವೇದಿ ಗ್ರೂಪ್ ಸೈನ್ಸಸ್‌ನ ಅಧ್ಯಯನ ವರದಿಯ ಆಧಾರದ ಮೇಲೆ ಅನುಮತಿ ನೀಡಿದ್ದಾರೆ. ಆದಾಗ್ಯೂ ಆನಂದಯ್ಯ ಅವರು ತಯಾರಿಸಿರುವ ಐ ಡ್ರಾಪ್ಸ್ಗೆ ಅನುಮತಿ ಸಿಕ್ಕಿಲ್ಲ ಎಂದು ವರದಿಯಾಗಿದೆ.
ಸರ್ಕಾರ ಈ ಔಷಧಕ್ಕೆ ಅನುಮತಿ ನೀಡಿದ್ದರೂ, ಐ ಡ್ರೋಪ್ಸ್ ಪಡೆದ ವ್ಯಕ್ತಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಔಷಧಿ ಕೊಳ್ಳುವವರ ಸಂಖ್ಯೆ ಇಳಿಮುಖವಾಗುವ ಸಾಧ್ಯತೆ ಇದೆ.