ಪುನರಾರಂಭಗೊಳ್ಳಲಿದೆ ಐಪಿಎಲ್ 2021 | ಸೆಪ್ಟೆಂಬರ್ ನಲ್ಲಿ ಐಪಿಎಲ್ ಪ್ರೇಮಿಗಳಿಗೆ ಕ್ರಿಕೆಟ್ ನ ರಸದೌತಣ
ಐಪಿಎಲ್ ಪ್ರೇಮಿಗಳಿಗೊಂದು ಸಿಹಿಸುದ್ದಿ. ಕೊರೊನಾ ಎರಡನೇ ಅಲೆಯಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡಿರುವ ಐಪಿಎಲ್ 2021ಆವೃತ್ತಿಯನ್ನು ದುಬೈನಲ್ಲಿ ಮುಂದುವರೆಸಲು ಬಿಸಿಸಿಐ ನಿರ್ಧರಿಸಿದೆ. ಸೆಪ್ಟೆಂಬರ್ 18 ಅಥವಾ 19ರಿಂದ ಐಪಿಎಲ್ 14 ಪುನಾರಂಭಗೊಳ್ಳಲಿದ್ದು ಮೂರು ವಾರಗಳ ಕಾಲ ನಡೆಯಲಿರುವ ಆವೃತ್ತಿಯ ದ್ವಿತೀಯಾರ್ಧದಲ್ಲಿ 10 ಮುಖಾಮುಖಿ ಪಂದ್ಯಗಳನ್ನು ಆಯೋಜಿಸಲು ಚಿಂತಿಸಲಾಗಿದೆ ಎಂದು ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆ ಮೂಲಕ ಅರ್ಧದಲ್ಲೇ ನಿಂತು ಕ್ರಿಕೆಟ್ ಪ್ರೇಮಿಗಳಿಗೆ ಉಂಟಾಗಿದ್ದ ನಿರಾಸೆಯನ್ನು ಶಮನ ಮಾಡಲು ಬಿಸಿಸಿಐ ಚಿಂತಿಸುತ್ತಿರುವುದು ದೃಢಪಟ್ಟಿದೆ.
ಸೆಪ್ಟೆಂಬರ್ 18 ಶನಿವಾರ ಹಾಗೂ 19ನೇ ತಾರೀಖು ಭಾನುವಾರ ಆಗಿರುವುದರಿಂದ ಪಂದ್ಯಗಳನ್ನು ಪುನಾರಂಭಿಸಲು ಇದು ಅತ್ಯಂತ ಸೂಕ್ತ ದಿನವೆಂದು ಬಿಸಿಸಿಐ ನಿರ್ಧರಿಸಿದೆ. ಹೀಗಾಗಿ ಮೇ 4ರಂದು ಏಕಾಏಕಿ ನಿಂತಿದ್ದ ಪಂದ್ಯ ಈಗ ಮತ್ತೆ ಆರಂಭಗೊಳ್ಳುವುದು ಖಚಿತವಾಗಿದೆ. ಉಳಿದ 31 ಪಂದ್ಯಗಳನ್ನು ಆಡಿಸಬೇಕೆಂದರೂ ಮೂರು ವಾರಗಳ ಕಾಲ ಎಷ್ಟೋ ಸಾಕು ಎಂದು ಅಭಿಪ್ರಾಯಪಟ್ಟಿರುವ ಬಿಸಿಸಿಐ ಈ ಬಾರಿಯ ಸರಣಿಗೆ ಸೂಕ್ತ ಅಂತ್ಯ ನೀಡಲೇಬೇಕೆಂಬ ಕಾರಣಕ್ಕೆ ಈ ನಿಲುವು ತಾಳಿರುವುದಾಗಿ ತಿಳಿಸಿದೆ.
ಈ ಸರಣಿಯ ಫೈನಲ್ ಪಂದ್ಯವನ್ನು ಅಕ್ಟೋಬರ್ 9 ಅಥವಾ 10ರಂದು ಆಡಿಸಲು ಬಿಸಿಸಿಐ ನಿರ್ಧರಿಸಿದೆ ಎಂಬುದು ಕೂಡಾ ಇದೇ ಸಂದರ್ಭದಲ್ಲಿ ಬಹಿರಂಗವಾಗಿದೆ. ಬಾಕಿ ಸರಣಿಯಲ್ಲಿ 10 ಮುಖಾಮುಖಿ ಪಂದ್ಯಗಳು (ಒಟ್ಟು 20 ಪಂದ್ಯ), ಏಳು ಸಂಜೆ ಅವಧಿಯ ಪಂದ್ಯಗಳು, 2 ಕ್ವಾಲಿಫೈಯರ್, ಒಂದು ಎಲಿಮಿನೇಟರ್ ಹಾಗೂ ಒಂದು ಅಂತಿಮ ಪಂದ್ಯ ಸೇರಿ ಒಟ್ಟು 31 ಪಂದ್ಯ ಇರಲಿದೆ ಎಂದು ಬಿಸಿಸಿಐ ಈಗ ನೀಡಿರುವ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಮ್ಯಾಚ್ ಸೆಪ್ಟೆಂಬರ್ 14ರಂದು ಅಂತ್ಯಗೊಳ್ಳಲಿದ್ದು ಅಲ್ಲಿಂದ ಭಾರತೀಯ ಆಟಗಾರರೆಲ್ಲರೂ ಅತ್ಯಂತ ಸುರಕ್ಷಿತ ರೀತಿಯಲ್ಲಿ ದುಬೈ ತಲುಪಲಿದ್ದಾರೆ. ಹಾಗೆಯೇ ಉಳಿದ ಆಟಗಾರರನ್ನೂ ಕರೆತರಲಾಗುವುದು ಎಂದು ಆಯೋಜಕರು ಹೇಳಿದ್ದಾರೆ. ಭಾರತದಲ್ಲಿ ಬಯೋ ಬಬ್ಬಲ್ ಇದ್ದಾಗಿಯೂ ಉಂಟಾಗಿದ್ದ ಸಮಸ್ಯೆಗಳು ಮತ್ತೆ ತಲೆದೋರದಂತೆ ನೋಡಿಕೊಳ್ಳುವುದಾಗಿಯೂ ಇದೇ ವೇಳೆ ಭರವಸೆ ನೀಡಲಾಗಿದೆ.
ಅರ್ಧಕ್ಕೆ ನಿಂತ ಐಪಿಎಲ್ ಸರಣಿಯಿಂದಾಗಿ ಹಲವು ಪ್ರೇಕ್ಷಕರಿಗೆ ನಿರಾಸೆ ಉಂಟಾಗಿದ್ದು, ಇದೀಗ ಮತ್ತೆ ಆರಂಭಗೊಳ್ಳಲಿರುವ ಸರಣಿಗಾಗಿ ಎಲ್ಲರೂ ತುದಿಗಾಲಿನಲ್ಲಿ ಕಾಯ ತೊಡಗಿದ್ದಾರೆ.