ಜೂನ್ 7ರವರೆಗಿನ ಪರಿಸ್ಥಿತಿ ಪರಾಮರ್ಶಿಸಿ ಮುಂದಿನ ತೀರ್ಮಾನ: ಸಿ.ಎಂ. ಯಡಿಯೂರಪ್ಪ
ಪ್ರಸ್ತುತ ಜಾರಿಯಲ್ಲಿರುವ ಲಾಕ್ಡೌನ್ ಜೂನ್ 7ರವರೆಗೆ ಇರಲಿದ್ದು,ಅಲ್ಲಿಯ ತನಕದ ಪರಿಸ್ಥಿತಿ ಪರಾಮರ್ಶಿಸಿ ಲಾಕ್ಡೌನ್ ವಿಸ್ತರಿಸುವ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.
ಅವರು ಶನಿವಾರ ಕೋವಿಡ್ ನಿಯಂತ್ರಣ ಕುರಿತಂತೆ ಮೈಸೂರು, ಹಾಸನ, ಬೆಳಗಾವಿ, ಕಲಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳ ಸಂಸದರು ಮತ್ತು ಶಾಸಕರೊಂದಿಗೆ ವೀಡಿಯೊ ಸಂವಾದ ನಡೆಸಿದ ಬಳಿಕ ಮಾತನಾಡಿದರು.
ಸುಮಾರು ಎರಡೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳು, ಸವಾಲುಗಳ ಕುರಿತು ಮುಕ್ತವಾಗಿ ಚರ್ಚಿಸಿದರು.
ಕೋವಿಡ್ ಪಾಸಿಟಿವಿಟಿ ದರ ಶೇ.10 ಕ್ಕಿಂತ ಕಡಿಮೆ ಮಾಡುವಂತೆ ಸೂಚಿಸಲಾಯಿತು. ಸಾವಿನ ಪ್ರಮಾಣ ರಾಜ್ಯದಲ್ಲಿ 1.7 % ಇದ್ದು, ಇದನ್ನು ಕಡಿಮೆ ಮಾಡುವಂತೆ ಸೂಚಿಸಲಾಯಿತು.
ರಾಜ್ಯದಲ್ಲಿ ಒಟ್ಟು ವರದಿಯಾಗುತ್ತಿರುವ ಪ್ರಕರಣಗಳಲ್ಲಿ ಬೆಂಗಳೂರು ನಗರ, ಮೈಸೂರು, ತುಮಕೂರು, ಹಾಸನ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಒಟ್ಟು ಶೇ.60 ಪ್ರಕರಣಗಳು ವರದಿಯಾಗುತ್ತಿದೆ.
ಕೋವಿಡ್ 19ರ ಎರಡನೇ ಅಲೆ ಬಾರಿ ಪ್ರಮಾಣದಲ್ಲಿ ಬಾಧಿಸಿದೆ. ಪ್ರಸ್ತುತ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಸಮಾಧಾನದ ಸಂಗತಿ. ಕೋವಿಡ್ 19 ಸೋಂಕು ತೀವ್ರವಾಗಿದ್ದಾಗ ಎಲ್ಲ ಜನಪ್ರತಿನಿಧಿಗಳೂ ಅಧಿಕಾರಿಗಳೊಂದಿಗೆ ಕೈಜೋಡಿಸಿ, ಸೋಂಕು ನಿಯಂತ್ರಣಕ್ಕೆ ಶ್ರಮಿಸಿದ್ದಕ್ಕೆ ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಆದರೆ ಪ್ರಕರಣ ಕಡಿಮೆಯಾಗುತ್ತಿರುವ ಕುರಿತು ಕೈಕಟ್ಟಿ ಕೂರುವಂತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಪ್ರಕರಣಗಳ ಪ್ರಮಾಣ ಹೆಚ್ಚಾಗುತ್ತಿದೆ. ಈ ಕುರಿತು ನಾವು ಹೆಚ್ಚಿನ ಗಮನ ಹರಿಸಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಹೋಂ ಐಸೋಲೇಷನ್ ಬದಲು ಸೋಂಕಿತರನ್ನು ಕೋವಿಡ್ ಕೇರ್ ಸೆಂಟರುಗಳಿಗೆ ದಾಖಲಿಸಲು ಮನವೊಲಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
ಶಾಸಕರು ಹಾಗೂ ಸಂಸದರು ತಮ್ಮ ಕ್ಷೇತ್ರಗಳಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸಿ, ಸೋಂಕಿತರನ್ನು ಪತ್ತೆ ಹಚ್ಚಿ ಸಕಾಲದಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇದರಿಂದ ಮರಣ ಪ್ರಮಾಣ ಕಡಿಮೆಯಾಗುವುದು. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯಗಳು, ಔಷಧ, ಆಮ್ಲಜನಕ, ವಿವಿಧ ಉಪಕರಣಗಳು ಅಗತ್ಯಕ್ಕೆ ಅನುಗುಣವಾಗಿ ಸಮರ್ಪಕವಾಗಿ ಹಂಚಿಕೆಯಾಗಬೇಕು. ಎಲ್ಲಿಯೂ ಸಮಸ್ಯೆ ತಲೆದೋರದಂತೆ ಸಂಪನ್ಮೂಲಗಳ ಬಳಕೆಯನ್ನು ಖಾತರಿಪಡಿಸುವಂತೆ ಮುಖ್ಯಮಂತ್ರಿ ಸಲಹೆ ನೀಡಿದರು.
ಸಂವಾದದಲ್ಲಿ ಭಾಗವಹಿಸಿದ ಶಾಸಕರು, ಸಂಸದರು, ಕೋವಿಡ್ 19 ನಿರ್ವಹಣೆ ಜೊತೆಗೆ ತಳಹಂತದ ಹಲವಾರು ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆದರು. ಇವುಗಳನ್ನು ಶೀಘ್ರವೇ ಬಗೆಹರಿಸುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದರು. ಆಶಾ ಕಾರ್ಯಕರ್ತೆಯರ ಬಾಕಿ ವೇತನ ಬಿಡುಗಡೆಗೆ ಈಗಾಗಲೇ ಕ್ರಮ ವಹಿಸಲಾಗಿದ್ದು, ಎರಡು ಮೂರು ದಿನಗಳಲ್ಲಿಯೇ ದೊರೆಯಲಿದೆ ಎಂದು ಅವರು ತಿಳಿಸಿದರು.
ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು, ಪ್ರತಿ ತಾಲೂಕಿಗೆ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಸರ್ಕಾರವು ಈಗಾಗಲೇ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ 50 ಲಕ್ಷ ರೂ. ಗಳನ್ನು ಕೋವಿಡ್ ನಿರ್ವಹಣೆಗೆ ಬಳಕೆ ಮಾಡಲು ಅನುಮತಿ ನೀಡಲಾಗಿದೆ. ಅಲ್ಲದೆ ಗ್ರಾಮ ಪಂಚಾಯತ್ ಗಳಿಗೆ ತಲಾ 50 ಸಾವಿರ ರೂ. ಬಿಡುಗಡೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಸಭೆಯಲ್ಲಿ ವೈದ್ಯರ ಕೊರತೆ ಕುರಿತು ಚರ್ಚೆ ನಡೆಯಿತು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ರಾಜ್ಯ ಸರ್ಕಾರ ಈಗಾಗಲೇ 1200 ವೈದ್ಯರ ನೇಮಕ ಮಾಡಿಕೊಳ್ಳುತ್ತಿದ್ದು, ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.