ಮೂಡಬಿದಿರೆ : ದರೋಡೆ‌ ಪ್ರಕರಣ | 11 ಮಂದಿ ಅಂತರಾಜ್ಯ ದರೋಡೆಕೋರರ ಬಂಧನ

ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನ ಹೊಂದಿದ್ದ ವ್ಯಕ್ತಿಯನ್ನು ಅಪಹರಿಸಿ ದರೋಡೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಸಿಸಿಬಿ ಮತ್ತು ಮೂಡುಬಿದಿರೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 11 ಮಂದಿ ಅಂತಾರಾಜ್ಯ ದರೋಡೆಕೋರರನ್ನು ಬಂಧಿಸಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಆಯುಕ್ತರು, ಜೋಕಟ್ಟೆ ತೋಕೂರು ನಿವಾಸಿಗಳಾದ ಅಬ್ದುಲ್ ಸಲಾಂ ಯಾನೆ ಪಟೌಡಿ ಸಲಾಂ (34), ಮುಹಮ್ಮದ್ ಶಾರೂಕ್ (26), ಬೆಂಗಳೂರು ಜೆಎಚ್‌ಬಿಸಿಎಸ್ ಲೇಔಟ್‌ನ ಸಯ್ಯದ್ ಹೈದರಲಿ (29), ಬೆಂಗಳೂರು ಜೆಪಿ ನಗರದ ಆಸಿಫ್ ಅಲಿ (28), ಮುಂಬೈನವರಾದ ಶೇಖ್ ಸಾಜಿದ್ ಹುಸೇನ್ (49), ಅಬ್ದುಲ್ಲಾ ಶೇಖ್ (22), ಶಾಬಾಸ್ ಹುಸೇನ್ (49), ಥಾಣೆಯ ಮುಶಾಹಿದ್ ಅನ್ಸಾರಿ (38), ಮುಸ್ತಾಕ್ ಖುರೇಷಿ (42), ಮುಹಮ್ಮದ್ ಮಹಝ್(20) ಮತ್ತು ಮುಹಮ್ಮದ್ ಆದಿಲ್(25) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಲ್ಲಿ ಮಾಜಿ ಶಾಸಕರೊಬ್ಬರ ಮಾಜಿ ಕಾರು ಚಾಲಕನೂ ಸೇರಿದ್ದಾನೆ ಎಂದು ತಿಳಿಸಿದ್ದಾರೆ.

ಆರೋಪಿಗಳಿಂದ ಎರಡು ಕಾರು, ಐದು ತಲವಾರುಗಳು, 10 ಮೊಬೈಲ್‌ ಫೋನ್ ಗಳು ಹಾಗೂ ದರೋಡೆ ಮಾಡಲಾದ 440 ಗ್ರಾಂ ಚಿನ್ನದಲ್ಲಿ 300 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಆರೋಪಿಗಳ ಪೈಕಿ ಅಬ್ದುಲ್ ಸಲಾಂ ವಿರುದ್ಧ ಪಣಂಬೂರು ಠಾಣೆಯಲ್ಲಿ ಹಲ್ಲೆ, ಜೀವ ಬೆದರಿಕೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಗೆ ಯತ್ನಿಸಿದ ಪ್ರಕರಣ, ಸುರತ್ಕಲ್ ಠಾಣೆಯಲ್ಲಿ ಕೊಲೆಯತ್ನ, ದರೋಡೆ ಪ್ರಕರಣ, ಬಜ್ಪೆ ಠಾಣೆಯಲ್ಲಿ ಹಲ್ಲೆ, ಬರ್ಕೆ ಠಾಣೆಯಲ್ಲಿ ಜೈಲಿನಲ್ಲಿದ್ದ ಸಮಯ ಹೊಡೆದಾಟ, ಮೂಡುಬಿದಿರೆ ಠಾಣೆಯಲ್ಲಿ ಕೊಲೆ ಯತ್ನ ಸೇರಿ 10 ಪ್ರಕರಣಗಳು ದಾಖಲಾಗಿದ್ದು, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಘಟನೆಯ ವಿವರ: ಮೇ ಮೊದಲ ವಾರದಲ್ಲಿ ಮುಂಬೈನ ರೆಹಮಾನ್ ಶೇಖ್ ಎಂಬವರು ಅವರ ಸಂಬಂಧಿಕರಾದ ಬೆಂಗಳೂರಿನ ಹೈದರಾಲಿಗೆ ನೀಡುವಂತೆ ಮೂಡಬಿದಿರೆಯ ವಕಾರ್ ಯೂನಸ್ ಬಳಿ ಚಿನ್ನವಿರುವ ಪಾರ್ಸಲ್ ನೀಡಿದ್ದರು. ಇದರ ಬಗ್ಗೆ ಮಾಹಿತಿ ತಿಳಿದ ಯೂನಸ್ ಸ್ನೇಹಿತ ಮೂಡಬಿದಿರೆ ಬೆಳುವಾಯಿ ನಿವಾಸಿ ಮಹಝ್ ಎಂಬಾತ ಯೂನಸ್ ನನ್ನು ನೇರವಾಗಿ ಬೆಳುವಾಯಿಗೆ ಬರುವಂತೆ ತಿಳಿಸಿದ್ದ. ಅದರಂತೆ ವಕಾರ್ ಯೂನಸ್ ಕಾರಿನಲ್ಲಿ ಬರುತ್ತಿದ್ದಾಗ ಪಚ್ಚಿಮೊಗರು ಎಂಬಲ್ಲಿ ಮಹಝ್, ಉಪ್ಪಳದ ಆದಿಲ್ ಹಾಗೂ ಆತನ ಸ್ನೇಹಿತರು ಭೇಟಿ ಮಾಡಿ, ಅಲ್ಲಿಂದ ಕೇರಳಕ್ಕೆ ಕರೆದುಕೊಂಡು ಹೋಗಿ ಪಾರ್ಸೆಲ್ ನಲ್ಲಿದ್ದ 440 ಗ್ರಾಂ ಚಿನ್ನ ದೋಚಿ, ಯೂನಸ್ ನನ್ನು ಉಪ್ಪಳದಲ್ಲಿ ಬಿಟ್ಟು ತೆರಳಿದ್ದರು.

ಇತ್ತ ಪಾರ್ಸೆಲ್ ತಲುಪದೇ ಇದ್ದ ಕಾರಣ ರೆಹಮಾನ್ ಶೇಖ್ ಮತ್ತು ಹೈದರಾಲಿಯವರು ಕೇಳಿದಾಗ ದರೋಡೆಯ ಬಗ್ಗೆ ವಕಾರ್ ಯೂನಸ್ ತಿಳಿಸಿದ್ದಾನೆ. ಆಗ “ಚಿನ್ನ ನೀಡು, ಇಲ್ಲದಿದ್ದರೆ ಸುಮ್ಮನೆ ಬಿಡುವುದಿಲ್ಲ” ಎಂದು ರೌಡಿಶೀಟರ್ ಪಟೌಡಿ ಸಲಾಂ ಮೂಲಕ ಬೆದರಿಕೆ ಹಾಕಿಸಿದ್ದಾರೆ. ಪಟೌಡಿ ಸಲಾಂ ನು ವಕಾರ್ ಯೂನಸ್ ನ ಮನೆಗೆ ತೆರಳಿ ಬೆದರಿಕೆ ಹಾಕಿದ್ದ. ಇದರಿಂದಾಗಿ ಚಿನ್ನ ದರೋಡೆಯ ಬಗ್ಗೆ ಯೂನಸ್ ಮೂಡಬಿದಿರೆ ಠಾಣೆಯಲ್ಲಿ ಮೇ 21ರಂದು ದೂರು ನೀಡಿದ್ದ.

ದೂರಿನನ್ವಯ ಮಂಗಳೂರು ಸಿಸಿಬಿ ಪೊಲೀಸರು ಮತ್ತು ಮೂಡಬಿದಿರೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕಾಲಿಯಾ ಸುಹೈಲ್ ಗ್ಯಾಂಗ್ ನ ಸಹಚರರಾದ ಮೊಹಮ್ಮದ್ ಮಜಝ್ ಮತ್ತು ಮೊಹಮ್ಮದ್ ಆದಿಲ್ ನನ್ನು ಮೇ 22ರಂದು ಬಂಧಿಸಿದ್ದರು. ಇದಲ್ಲದೆ ಕಾಂಞಗಾಂಡ್ ನ ಜುವೆಲ್ಲರಿಗೆ ಮಾರಿದ್ದ 13,86,600 ರೂ. ಮೌಲ್ಯದ 300 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದರು.

ಚಿನ್ನ ಕಳೆದುಕೊಂಡಿದ್ದ ಮುಂಬೈಯ ರೆಹಮಾನ್ ಶೇಖ್ ನು ಚಿನ್ನ ವಸೂಲಿ ಮಾಡಲು ಆಗದಿದ್ದಲ್ಲಿ ಯೂನಸ್ ನ ಕೊಲೆ ಮಾಡಲು ರೌಡಿ ಶೀಟರ್ ಪಟೌಡಿ ಸಲಾಂಗೆ ಐದು ಲಕ್ಷ ರೂ ಗೆ ಸುಪಾರಿ ನೀಡಿದ್ದ. ಪಟೌಡಿ ಸಲಾಂನು, ರೆಹಮಾನ್ ಶೇಖ್ ನ ತಮ್ಮ ಅಬ್ದುಲ್ ಶೇಖ್ ಸೇರಿದಂತೆ ನಾಲ್ಕು ಮಂದಿ ರೌಡಿಗಳು ಮತ್ತು ಬೆಂಗಳೂರಿನಿಂದ ಬಂದ ಮೂವರು ಸೇರಿ ಮಾರಾಕಾಯುಧಗಳೊಂದಿಗೆ ಕೊಲೆಗೆ ಯೋಜನೆ ಹಾಕಿದ್ದರು. ಬೆಳುವಾಯಿಯ ಮಹಜ್ ನ ಮನೆಯ ಬಳಿ ಇನ್ನೋವಾ ಮತ್ತು ಸ್ವಿಫ್ಟ್ ಕಾರಿನಲ್ಲಿ ಆರೋಪಿಗಳು ಕುಳಿತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಕುರಿತು ಮೂಡಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

Leave A Reply

Your email address will not be published.