ರಾಜ್ಯದಲ್ಲಿ ಇಳಿಕೆಯಾಗುತ್ತಿರುವ ಕೊರೋನ ಪ್ರಕರಣ | ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆ

ರಾಜ್ಯದಲ್ಲೀಗ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕೊಂಚ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಲಾಕ್ ಡೌನ್ ನಿಯಮದಲ್ಲಿ ಸಡಿಲಿಕೆಯನ್ನು ಮಾಡಿದೆ. ನ್ಯಾಯಾಲಯದ ಕಾರ್ಯ ಕಲಾಪಕ್ಕೆ ಅವಕಾಶ ಕಲ್ಪಿಸಿರುವ ಸರಕಾರ ಅಸ್ಥಿ ವಿಸರ್ಜನೆ ಮಾಡಲು ಗ್ರೀನ್ ಸಿಗ್ನಲ್ ನೀಡಿದೆ.

 

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಇಳಿಕೆಯಾಗುತ್ತಿದೆ. ಆದ್ರೆ ಸಂಪೂರ್ಣವಾಗಿ ತಹಬದಿಗೆ ಬಂದಿಲ್ಲ. ಹೀಗಾಗಿ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಸಂಖ್ಯೆ 2000 ಹಾಗೂ ಬೆಂಗಳೂರಿನಲ್ಲಿ ನಿತ್ಯವೂ 500 ಕೇಸ್ ಗಳಿಗೆ ಇಳಿಕೆ ಕಾಣುವವರೆಗೂ ಲಾಕ್ ಡೌನ್ ವಿಸ್ತರಣೆಯ ಮಾಡುವ ಚಿಂತನೆಯಲ್ಲಿದೆ ರಾಜ್ಯ ಸರಕಾರ. ಆದರೆ ಸೋಂಕು ಇಳಿಕೆಯಾಗುತ್ತಲೇ ಒಂದೊಂದೇ ಸೇವೆಗಳಿಗೆ ಅವಕಾಶ ನೀಡಲು ಸರಕಾರ ಮುಂದಾಗಿದೆ.

ಲಾಕ್ ಡೌನ್ ಅವಧಿಯಲ್ಲಿ ರಸ್ತೆ, ಕಟ್ಟಡ ನಿರ್ಮಾಣ ಕಾಮಗಾರಿ ಸೇರಿದಂತೆ ಹಲವು ಕಾರ್ಯಗಳನ್ನು ಕೈಗೊಳ್ಳಲು ರಾಜ್ಯ ಸರಕಾರ ಅನುಮತಿಯನ್ನು ನೀಡಿತ್ತು. ಇದೀಗ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದಂತೆಯೇ ವಕೀಲರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದು, ಶೇ.50ರಷ್ಟು ಸಿಬ್ಬಂದಿಗಳೊಂದಿಗೆ ನ್ಯಾಯಾಲಯದ ಕಾರ್ಯ ಕಲಾಪ ನಡೆಸಬಹುದಾಗಿದೆ. ಅಲ್ಲದೇ ವಕೀಲರು ಕೂಡ ತಮ್ಮ ಕಚೇರಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

ಅಷ್ಟೇ ಅಲ್ಲದೇ ಲಾಕ್ ಡೌನ್ ಹಿನ್ನೆಲೆಯಲ್ಲಿ ಇ-ಕಾಮರ್ಸ್ ಮೂಲಕ ವಸ್ತುಗಳನ್ನು ಹೋಮ್ ಡೆಲಿವರಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಇ ಕಾಮರ್ಸ್ ಸೇರಿದಂತೆ ಎಲ್ಲಾ ರೀತಿಯ ಹೋಮ್ ಡೆಲಿವರಿ ಸೇವೆಗಳು ಪುನರಾರಂಭವಾಗಲಿದೆ. ಜನರು ತಮಗೆ ಬೇಕಾದ ವಸ್ತುಗಳನ್ನು ಆನ್ ಲೈನ್ ಮೂಲಕ ಖರೀದಿ ಮಾಡಬಹುದಾಗಿದೆ.

ಕೊರೊನಾ ವೈರಸ್ ಸೋಂಕು ಸೇರಿದಂತೆ ನಾನಾ ಕಾರಣಗಳಿಂದಾಗಿ ಮೃತಪಟ್ಟವರ ಅಸ್ಥಿಗಳನ್ನು ವಿಸರ್ಜನೆ ಮಾಡಲು ಲಾಕ್ ಡೌನ್ ತೊಡಕಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ 4 ಜನರಿಗೆ ಅಸ್ಥಿ ವಿಸರ್ಜನೆಯನ್ನು ಮಾಡಲು ಅವಕಾಶ ಕಲ್ಪಿಸಿದೆ. ಅಸ್ಥಿ ವಿಸರ್ಜನಾ ಕಾರ್ಯಕ್ಕೆ ಯಾವುದೇ ಕಾರಣಕ್ಕೂ ಅಡ್ಡಿ ಪಡಿಸದಂತೆ ಪೊಲೀಸ್ ಇಲಾಖೆಗೆ ನಿರ್ದೇಶನವನ್ನು ನೀಡಿದೆ.

Leave A Reply

Your email address will not be published.