ಅಡಕೆ ಬೆಳೆಗಾರರಿಗೆ ಸಂತಸದ ಸುದ್ದಿ
ಮಂಗಳೂರು: ಕರಾವಳಿಯ ಆರ್ಥಿಕತೆಯ ಜೀವನಾಡಿ ಬೆಳೆ ಅಡಕೆ ಕ್ಯಾನ್ಸರ್ಕಾರಕ , ಆರೋಗ್ಯಕ್ಕೆ ಹಾನಿಕಾರಕ ಎಂಬ ಆರೋಪ ಸುಪ್ರೀಂ ಕೋರ್ಟ್ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವಾಗಲೇ ಈಗ ಬೆಳೆಗಾರರಿಗೆ ಸಂತಸ ತರುವ ಸುದ್ದಿಯೊಂದು ಬಂದಿದೆ .
ಅಮೆರಿಕದ ಪ್ರಸಿದ್ದ ‘ ಮೊಲೆಕ್ಯುಲರ್ ಸೆಲ್ ‘ ಹೆಸರಿನ ಜರ್ನಲ್ನಲ್ಲಿ ಕ್ಯಾನ್ಸರ್ಗೆ ಕಾರಣವಾಗುವ ಅಂಶಗಳಲ್ಲಿ ಅಡಕೆಯ ಉಲ್ಲೇಖವನ್ನೇ ಕೈಬಿಡಲಾಗಿದೆ . ಇದರಿಂದ ಅಡಕೆಯನ್ನು ಕ್ಯಾನ್ಸರ್ಕಾರಕ , ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎನ್ನುವ ಅಡಕೆ ಬೆಳೆಗಾರರ ವಾದಕ್ಕೆ ಇನ್ನಷ್ಟು ಪುಷ್ಟಿನೀಡಿದಂತಾಗಿದೆ .
ಇಮೋ ವಿಶ್ವವಿದ್ಯಾಲಯದ ಸಂಶೋಧನಾ ವರದಿ ‘ ಮೊಲೆಕ್ಯುಲರ್ ಸೆಲ್ ‘ ಜರ್ನಲ್ನಲ್ಲಿ ಪ್ರಕಟವಾಗಿದೆ . ಅಡಕೆಯಲ್ಲಿನ ಅರೆಕೋಲಿನ್ ಅಂಶವನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಿದಾಗ ಅದರಲ್ಲಿ ಯಾವುದೇ ಕ್ಯಾನ್ಸರ್ಕಾರಕ ಅಂಶಗಳು ವೈಜ್ಞಾನಿಕವಾಗಿ ಕಂಡುಬಂದಿಲ್ಲ ಎಂಬುದನ್ನು ಸಂಶೋಧಕರು ಕಂಡುಕೊಂಡಿರುವುದನ್ನು ವರದಿಯಲ್ಲಿ ಉಲ್ಲೇಖಿಸಿದ್ದಾರೆ . ಇದು ಅಡಕೆ ಕ್ಯಾನ್ಸರ್ಕಾರಕ ಅಲ್ಲ ಎಂದು ಸುಪ್ರೀಂ ಕೋರ್ಟ್ನಲ್ಲಿ ಸಮರ್ಥ ವಾದ ಮಂಡಿಸಲು ಅಡಕೆ ಬೆಳೆಗಾರರ ಪರವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಹಾಗೂ ಅಂತಾರಾಜ್ಯ ಸಹಕಾರಿ ಸಂಸ್ಥೆಗೆ ನೆರವಾಗಲಿದೆ.