ಅಲೋಪತಿ ವೈದ್ಯ ವಿಜ್ಞಾನವನ್ನು ‘ಮೂರ್ಖರ ವಿಜ್ಞಾನ ‘ ಎಂದಿದ್ದ ಯೋಗ ಗುರು ಬಾಬಾ ರಾಮ್ ದೇವ್ ಹೇಳಿಕೆ ವಾಪಸ್
ಯೋಗ ಗುರು ರಾಮದೇವ್ ಅವರು ಅಲೋಪಥಿ ಔಷಧಿ ಬಗ್ಗೆ ಇತ್ತೀಚಿಗೆ ನೀಡಿದ ಹೇಳಿಕೆಗೆ ವೈದ್ಯವೃಂದದಿಂದ ಮತ್ತು ಸಾರ್ವಜನಿಕ ವಲಯದಿಂದ ವ್ಯಾಪಕ ಟೀಕೆ, ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.
ರಾಮದೇವ್ ಅವರು ಅಲೋಪಥಿಯನ್ನು ಮೂರ್ಖ ವಿಜ್ಞಾನ ಎಂದು ಹೇಳಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ ಹೇಳಿತ್ತು.
ನಿನ್ನೆ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ ಅವರು ಯೋಗಗುರು ರಾಮದೇವ್ ಅವರನ್ನು ತಮ್ಮ ಹೇಳಿಕೆ ಹಿಂಪಡೆಯಲು ಆಗ್ರಹಿಸಿದ್ದರು. ಅವರ ಪತ್ರಕ್ಕೆ ನಿನ್ನೆ ಪ್ರತಿಕ್ರಿಯಿಸಿದ ಯೋಗಗುರು ರಾಮದೇವ್, ತಾವು ಹೇಳಿಕೆಯನ್ನು ಹಿಂಪಡೆಯುತ್ತಿದ್ದು, ವಿವಾದಕ್ಕೆ ಕೊನೆ ಎಳೆಯಲು ಬಯಸುತ್ತೇನೆ ಎಂದಿದ್ದಾರೆ.
ಕೇಂದ್ರ ಆರೋಗ್ಯ ಸಚಿವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಯೋಗ ಗುರು ರಾಮದೇವ್, ನನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ, ಹಲವು ವೈದ್ಯಕೀಯ ಪದ್ಧತಿಗಳ ವಿವಾದಕ್ಕೆ ಇತಿಶ್ರೀ ಹಾಡಲು ಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಯೋಗ ಗುರು ರಾಮದೇವ್ ಹೇಳಿರುವ ‘ ಮೂರ್ಖರ ವಿಜ್ಞಾನ ‘ ಮಾತಿನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಕೋವಿಡ್-19 ಗೆ ವೈದ್ಯರು, ವಿಜ್ಞಾನ ಲೋಕ ಕಂಡುಹಿಡಿದಿರುವ ರೆಮೆಡಿಸಿವಿರ್, ಫ್ಯಾಬಿಫ್ಲೂ ಮತ್ತು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದನೆ ನೀಡಿರುವ ಇತರ ಔಷಧಿಗಳು ವಿಫಲವಾಗಿದ್ದು ಲಕ್ಷಾಂತರ ರೋಗಿಗಳು ಮೃತಪಟ್ಟಿದ್ದಾರೆ. ಅಲೋಪಥಿ ಔಷಧಿಗಳನ್ನು ತೆಗೆದುಕೊಂಡ ನಂತರವೇ ರೋಗಿಗಳು ಮೃತಪಟ್ಟಿದ್ದಾರೆ ಎಂದು ಯೋಗ ಗುರು ರಾಮದೇವ್ ಆರೋಪಿಸಿದ್ದರು.
ಇಂತಹ ಅವೈಜ್ಞಾನಿಕ ಹೇಳಿಕೆಗಳ ಮೂಲಕ ಜನರ ಹಾದಿತಪ್ಪಿಸುತ್ತಿರುವ ರಾಮದೇವ್ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷ ವರ್ಧನ ಅವರನ್ನು ವೈದ್ಯಕೀಯ ಸಂಸ್ಥೆಗಳು ಒತ್ತಾಯಿಸಿದ್ದವು. ಇದೀಗ ರಾಮ್ ದೇವ್ ಅವರು ತಮ್ಮ ಹೇಳಿಕೆ ವಾಪಸ್ ಪಡೆಯುವ ಮೂಲಕ ವಿವಾದಕ್ಕೆ ತೆರೆ ಬಿದ್ದಿದೆ.