‘ಕೃಷ್ಣಾಪಟ್ಟಣಂ ಕೋವಿಡ್ ಆಯುರ್ವೇದ ಔಷಧಿ’ ಕೊಳ್ಳಲು 10000 ಜನರ ಭಾರೀ ಕ್ಯೂ | ಸೋಂಕು ಭೀತಿಯ ಹಿನ್ನೆಲೆಯಲ್ಲಿ ಔಷಧ ನೀಡಿಕೆಗೆ ತಾತ್ಕಾಲಿಕ ತಡೆ

ಆಂಧ್ರ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಭಾರೀ ಬೇಡಿಕೆ ಪಡೆದಿದ್ದ ಆಯುರ್ವೇದ ಔಷಧಿ ಮಾರಾಟಕ್ಕೆ ಇದೀಗ ತಡೆ ನೀಡಲಾಗಿದೆ. ಇಲ್ಲಿನ ಕೃಷ್ಣಾ ಪಟ್ಟಣಂನಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ‘ಕೃಷ್ಣಾಪಟ್ಟಣಂ ಕೋವಿಡ್-19 ಆಯುರ್ವೇದ ಔಷಧಿ’ ನೀಡಿಕೆಗೆ ತಾತ್ಕಾಲಿಕ ತಡೆ ಹೇರಲಾಗಿದೆ.

ಮಾರಕ ಕೊರೋನಾ ವೈರಸ್ ಸೋಂಕಿಗೆ ಆಯುರ್ವೇದ ವೈದ್ಯ ಆನಂದಯ್ಯ ಅವರು ನೀಡುತ್ತಿರುವ ಸಾಂಪ್ರಾದಾಯಿಕ ಆಯುರ್ವೇದ ಔಷಧಿಗೆ ಸಾವಿರಾರು ಜನರು ಮುಗಿಬಿದ್ದ ಹಿನ್ನೆಲೆಯಲ್ಲಿ ಇದು ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಸುತ್ತಮುತ್ತಲ ಜಿಲ್ಲೆಗಳೂ ಸೇರಿದಂತೆ ಅನೇಕ ರಾಜ್ಯಗಳಿಂದ ಸೋಂಕಿತರ ಸಂಬಂಧಿಕರು ಔಷಧಿಗಾಗಿ ಇಲ್ಲಿಗೆ ಆಗಮಿಸುತ್ತಿದ್ದು, ಇದರಿಂದ ಈ ಗ್ರಾಮದಲ್ಲಿ ತೀವ್ರ ಜನದಟ್ಟಣೆ ಉಂಟಾಗಿತ್ತು. ಏಕಕಾಲದಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಕ್ಯೂನಲ್ಲಿ ನಿಂತು ಔಷಧಿಗಾಗಿ ಕಾದಿದ್ದರು. ಅಲ್ಲದೆ ಗ್ರಾಮದಲ್ಲಿ ಸೋಂಕು ಹರಡುವ ಭೀತಿ ಕೂಡ ಉಂಟಾಗಿತ್ತು. ಇದೀಗ ಇಲ್ಲಿ ಔಷಧಿ ನೀಡಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಹಾಗೆಯೇ ಆನಂದಯ್ಯ ಅವರು ನೀಡುತ್ತಿರುವ ಆಯುರ್ವೇದ ಔಷಧಿಯ ವೈಜ್ಞಾನಿಕ ಪ್ರಾಮಾಣೀಕರಣಕ್ಕೆ ಆರೋಗ್ಯ ಇಲಾಖೆ ಮುಂದಾಗಿದ್ದು, ಆಯುಷ್ ಆಯುಕ್ತ ಲೆಫ್ಟಿನೆಂಟ್ ಕರ್ನಲ್ ರಾಮು ಸೇರಿದಂತೆ ಹಲವಾರು ಆಯುಷ್ ವೈದ್ಯರ ತಂಡ ಕೃಷ್ಣಪಟ್ಟಣಂಗೆ ದೌಡಾಯಿಸಿದ್ದಾರೆ. ಆಯುಷ್ ವೈದ್ಯರ ಸಮ್ಮುಖದಲ್ಲಿ ಆನಂದಯ್ಯ ಅವರು ಶನಿವಾರ ಬೆಳಿಗ್ಗೆ ಔಷಧಿ ತಯಾರಿಸುವ ಪ್ರಕ್ರಿಯೆಯನ್ನು ಪ್ರಸ್ತುತಪಡಿಸಿದ್ದಾರೆ. ಇನ್ನು ಆಯುಷ್ ಆಯೋಗವು ಆನಂದಯ್ಯ ಅವರ ಆಯುರ್ವೇದ ಔಷಧವನ್ನು ಪರಿಶೀಲಿಸಿದ್ದು, ಆ ಔಷಧಿಯಲ್ಲಿ ಹಾನಿಕಾರಕ ವಸ್ತುಗಳ ಬಳಕೆ ಮಾಡಿಲ್ಲ, ಪ್ರಮುಖವಾಗಿ ಸೋಂಕಿತರ ಕಣ್ಣಿಗೆ ಹಾಕುವ ದ್ರವ ಔಷಧದಲ್ಲಿ ಯಾವುದೇ ಹಾನಿಕಾರಕ ವಸ್ತುಗಳಿಲ್ಲ ಎಂದು ಸ್ಪಷ್ಟಪಡಿಸಿದೆ ಎನ್ನಲಾಗಿದೆ.

ಆದರೆ ಈ ಔಷಧ ಕೊರೋನಾ ಚಿಕಿತ್ಸೆಯಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಕುರಿತು ಪರಿಶೀಲನೆ ಇನ್ನು ನಡೆಯಬೇಕಿದೆ. ಇದಕ್ಕಾಗಿ ಕೇಂದ್ರ ಆಯುರ್ವೇದ ಸಂಶೋಧನಾ ತಂಡವನ್ನು ಅಲ್ಲಿಗೆ ಕಳುಹಿಸಲು ನಿರ್ಧರಿಸಿದ್ದು ಆನಂದಯ್ಯ ಅವರ ಔಷಧಿಯ ಕ್ಲಿನಿಕಲ್ ಪರೀಕ್ಷೆ ನಡೆಸಲಿದೆ ಎಂದು ಆರೋಗ್ಯ ವಿಭಾಗದ ಮುಖ್ಯ ಕಾರ್ಯದರ್ಶಿ ಅನಿಲ್ ಕುಮಾರ್ ಸಂಘಲ್ ಹೇಳಿದ್ದಾರೆ.

Leave A Reply

Your email address will not be published.