ಜಿಲ್ಲೆಯಲ್ಲಿ ಕೋವಿಡ್ನಿಂದ ಗುಣಮುಖರಾಗುವವರ ಪ್ರಮಾಣದಲ್ಲಿ ಏರಿಕೆ : ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.
ದ.ಕ.ಜಿಲ್ಲೆಯಲ್ಲಿ ಸದ್ಯ 10,398 ಕೋವಿಡ್ ಪ್ರಕರಣಗಳಿದೆ. 1,470 (ಶೇ.13.26) ರೋಗಿಗಳು ಆಸ್ಪತ್ರೆಯಲ್ಲಿ ಮತ್ತು 8,928(ಶೇ 85.86) ಮನೆ ಹಾಗೂ 91 (ಶೇ 0.88) ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದೊಂದು ವಾರ ದಿಂದ ಕೋವಿಡ್ ಪರೀಕ್ಷೆಯಲ್ಲಿ ಶೇ.31.58 ಸೋಂಕು ದೃಢ ಪಡುವ ಪ್ರಕರಣಗಳು ಕಂಡುಬರುತ್ತಿವೆ. ಪ್ರತಿದಿನ ಗುಣಮುಖ ಹೊಂದುವವರ ಪ್ರಮಾಣವು ಶೇ.84 .63ರಷ್ಟಿದ್ದರೆ ಮರಣ ಪ್ರಮಾಣವು ಶೇ.1.23 ರಷ್ಟಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಕುರಿತು ನಡೆದ ವೈದ್ಯಕೀಯ ತಜ್ಞರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 6,882 ಬೆಡ್ಗಳಿದೆ. ಆ ಪೈಕಿ 1,470 ರೋಗಿಗಳ ಬಳಕೆಯಲ್ಲಿದರೆ 5,412 ಬೆಡ್ಗಳು ಖಾಲಿ ಇವೆ, ಸಾಮಾನ್ಯ ಬೆಡ್ಗಳಲ್ಲಿ 472 ,ಆಕ್ಸಿಜನ್ ಬೆಡ್ ನಲ್ಲಿ 555, ಹೈಫ್ಲೋ ಆಕ್ಸಿಜನ್ ಬೆಡ್ಗಳಲ್ಲಿ 114, ಐಸಿಯುನಲ್ಲಿ 146, ವೆಂಟಿಲೇಟರ್ ನಲ್ಲಿ 183 ಸೇರಿದಂತೆ 1470 ಬೆಡ್ಗಳು ಭರ್ತಿಯಾಗಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಬ್ಲ್ಯಾಕ್ ಫಂಗಸ್ ರೋಗವು ಸೋಂಕಿನ ರೋಗವಲ್ಲ. ಜನರು ಇದರ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ಆಸ್ಪತ್ರೆಗಳಲ್ಲಿ ಬ್ಲಾಕ್ ಫಂಗಸ್ ರೋಗಕ್ಕೆ ಚಿಕಿತ್ಸೆಗೆ ಬರುವ ಜಿಲ್ಲೆಯ ಹಾಗೂ ಹೊರಜಿಲ್ಲೆಯವರ ಬಗ್ಗೆ ಪ್ರತೀ ದಿನದ ಮಾಹಿತಿಯನ್ನು ಎಲ್ಲಾ ಆಸ್ಪತ್ರೆಗಳು ನೋಡಲ್ ಅಧಿಕಾರಿಗಳಿಗೆ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಕಾರಣವನ್ನು ತಿಳಿದುಕೊಳ್ಳಲು 5ರಿಂದ 6 ಮಂದಿಯ ತಜ್ಞರ ತಂಡವು ಕೋವಿಡ್ ಚಿಕಿತ್ಸೆ ನೀಡುವುದರ ಜೊತೆಯಲ್ಲಿ ಮರಣ ಹೊಂದಿದವರ ಕುಟುಂಬವನ್ನು ಸಂಪರ್ಕಿಸಿ ರೋಗಿಯ ಬಗ್ಗೆ ಪ್ರಥಮ ಹಂತದಿಂದ ಮರಣ ಹೊಂದುವ ತನಕ ದವರೆಗೆ ನಡೆದ ಪ್ರತಿಯೊಂದು ಮಾಹಿತಿಯನ್ನು ಕ್ರೋಢೀಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಶಾಸಕ ಡಾ.ಭರತ್ ವೈ. ಶೆಟ್ಟಿ, ಮಂಗಳೂರು ಎ.ಸಿ. ಮಧನ್ ಮೋಹನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಕುಮಾರ್, ಜಿಲ್ಲಾ ಶಸ್ರ ಚಿಕಿತ್ಸಕ ಮತ್ತು ಅಧೀಕ್ಷಕ ಡಾ. ಸದಾಶಿವ ಶ್ಯಾನುಬೋಗ್, ಡಾ. ಅಶೋಕ್, ಡಾ. ಬಾಳಿಗಾ, ಡಾ. ಶರತ್, ಡಾ. ರಾಜೇಶ್ ಬಿ ಉಪಸ್ಥಿತರಿದ್ದರು.