ತಂದೆಯ ಮರಣದ ಸುದ್ದಿ ತಿಳಿಸಿದರೂ ನೋಡಲು ಬಾರದ ಮಗ, ತಂದೆಯ ಲಕ್ಷಾಂತರ ಹಣವನ್ನು ಮಾತ್ರ ತಂದು ಕೊಡುವಂತೆ ತನ್ನ ವಿಳಾಸ ಹೇಳಿದ ಕಥೆ !
ದುಡ್ಡು ಎಷ್ಟು ಖರ್ಚಾದರೂ ಪರವಾಗಿಲ್ಲ. ನನ್ನ ತಂದೆ ತಾಯಿಯನ್ನು,ಬಂಧುಗಳನ್ನು ಉಳಿಸಿಕೊಡಿ ಎಂದು ಆಸ್ಪತ್ರೆಯಲ್ಲಿ ವೈದ್ಯರಲ್ಲಿ ಅಂಗಲಾಚಿ ಬೇಡಿಕೊಳ್ಳುವುದನ್ನು ನಾವು ಕಂಡಿದ್ದೇವೆ. ಅಂತಹ ವಿಷಯಗಳನ್ನು ಅಗಾಗ ಕೇಳಿದ್ದೇವೆ.
ಆದರೆ ಇಲ್ಲೊಬ್ಬ ನಿಷ್ಕರುಣಿ ಪಾಪಿ ಪುತ್ರ ತನ್ನ ತಂದೆಯ ಮರಣದ ಸುದ್ದಿ ತಿಳಿಸಿದರೂ ಕೊನೆ ಕ್ಷಣದಲ್ಲಿ ತಂದೆಯ ಮುಖ ನೋಡಲು ಕೂಡ ಬಾರದೇ, ತಂದೆಯ ಬಳಿಯಿದ್ದ ಲಕ್ಷಾಂತರ ಹಣವನ್ನು ಮಾತ್ರ ತನಗೆ ತಂದು ಕೊಡುವಂತೆ ತನ್ನ ವಿಳಾಸ ಹೇಳಿದ ಕಥೆಯಿದು.
ಮೈಸೂರಿನಲ್ಲಿ ಕೊರೊನಾದಿಂದ ವ್ಯಕ್ತಿಯೊಬ್ಬರ ತಂದೆ ನಿಧನರಾಗಿದ್ದಾರೆ. ಈ ವಿಚಾರವನ್ನು ಅವರ ಮಗನಿಗೆ ತಿಳಿಸಲಾಗಿದ್ದು ಆತ ಶವ ಕೂಡ ನೋಡಲು ಬಾರದೆ, ತಂದೆ ಶವ ಬೇಡ, ಹಣ ಬೇಕು ಎಂದು ನೇರ ಕೇಳಿರುವ ವಿದ್ಯಾಮಾನ ನಡೆದಿದೆ.
ತಂದೆಯ ಶವ ನೀವೇ ಸುಟ್ಟು ಹಾಕಿ, ತಂದೆ ಮನೆಯಲ್ಲಿ ಇಟ್ಟಿರುವ ಹಣವನ್ನು ನಾನು ಇರುವ ಸ್ಥಳಕ್ಕೆ ತಂದು ಕೊಡಿ ಎಂದು ಕರೆ ಮಾಡಿದವರಿಗೆ ಆತ ತಾಕೀತು ಮಾಡಿದ್ದಾನೆ. ನೀವು ಮಾಡಿರುವ ಖರ್ಚನ್ನು ಅದೇ ಹಣದಲ್ಲಿ ಕೊಡುತ್ತೇನೆ ಎಂದಿದ್ದಾನೆ ಪಾಪಿ ಪುತ್ರ.
ಮೈಸೂರಿನ ಹೆಬ್ಬಾಳದ ಸೂರ್ಯ ಬೇಕರಿ ಬಳಿಯ ಮನೆಯೊಂದರಲ್ಲಿ ವೃದ್ಧ ನಿವಾಸಿಯೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ತಂದೆ ಮೃತಪಟ್ಟಿರೋ ಬಗ್ಗೆ ಅವರಿಂದ ದೂರ ಇದ್ದ ಅವರ ಮಗನಿಗೆ ಸ್ಥಳೀಯ ಮಹಾ ನಗರ ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್ ಅವರು ದೂರವಾಣಿ ಕರೆಮಾಡಿ ವಿಷಯ ತಿಳಿಸಿದ್ದಾರೆ.
ಆಗ ಮಗ, “ತಂದೆಯ ಅಂತ್ಯಕ್ರಿಯೆ ನೀವೆ ಮುಗಿಸಿ. ಆದರೆ ತಂದೆಯ ಬಳಿ ಇರುವ 6 ಲಕ್ಷ ಹಣ ಹಾಗೂ ಇನ್ನಿತರ ದಾಖಲೆಗಳನ್ನು ತಂದು ಕೊಡಿ. ನಾನು ಮೈಸೂರಿನ ಕುವೆಂಪು ನಗರದ ಶಾಂತಿ ಸಾಗರ್ ಕಾಂಪ್ಲೆಕ್ಸ್ ಬಳಿ ಇದ್ದೇನೆ. ಅಲ್ಲಿಗೆ ಹಣ, ದಾಖಲೆ ಎಲ್ಲಾ ತಂದು ಕೊಟ್ಟು ಬಿಡಿ” ಎಂದು ಹೇಳಿದ್ದಾನೆ.
ಈ ಮಾತು ಕೇಳಿದ್ದ ಸಾಮಾಜಿಕ ಮುಂದಾಳು, ಮೈಸೂರು ನಗರ ಪಾಲಿಕೆಯ ಸದಸ್ಯ ಶ್ರೀಧರ್ ಅವರು ಆ ವ್ಯಕ್ತಿಗೆ ಹಿಗ್ಗಾಮುಗ್ಗಾ ಬೈದಿದ್ದಾರೆ. ತಂದೆಯ ಅಂತಿಮ ಸಂಸ್ಕಾರಕ್ಕೆ ಬಾರದ ಮಗ ಅವರ ಹಣಕ್ಕೆ ಕೈಯೊಡ್ಡುತ್ತಿದ್ದಾನೆ ಎಂದು ಸರಿಯಾಗಿ ಬುದ್ದಿ ಹೇಳಿದ್ದಾರೆ ಮತ್ತು ಈ ಘಟನೆಯನ್ನು ತಮ್ಮ ಗೆಳೆಯರ ಬಳಿ ಹೇಳಿಕೊಂಡು ಅಂತಹ ಮಗನಿಗೆ ತಾವು ಕರೆ ಮಾಡಬೇಕಾಗಿ ಬಂದದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.