ದೇಶದ ಸಾರಿಗೆ ಉದ್ಯಮದ ದೈತ್ಯ 3000 ಬಸ್ಸುಗಳ ಒಡೆಯ SRS ಬಸ್ಸು ಮಾಲೀಕ ಕೆ.ಟಿ. ರಾಜಶೇಖರ್ ಕೊರೋನಾಗೆ ಬಲಿ
ದೇಶದ ಸಾರಿಗೆ ಉದ್ಯಮದ ದೈತ್ಯ ಮತ್ತು ಸಾರಿಗೆ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿ ಕೊಡುಗೆ ನೀಡಿದ್ದ ಎಸ್‌ಆರ್‌ಎಸ್ ಟ್ರಾವೆಲ್ಸ್ ಮತ್ತು ಲಾಜಿಸ್ಟಿಕ್ಸ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ಟಿ. ರಾಜಶೇಖರ್ (78) ನಿನ್ನೆ ಶುಕ್ರವಾರ ನಿಧನರಾದರು.
ಬೆಂಗಳೂರಿನ ಮಾಗಡಿಯ ರಾಜಶೇಖರ್ ಅವರು ದೇಶದ ಪ್ರಮುಖ ಸಾರಿಗೆ ಸಂಸ್ಥೆಗಳಲ್ಲಿ ಒಂದು ಎಂದೇ ಗುರುತಿಸಿಕೊಂಡಿದ್ದ ಎಸ್ಆರ್‌ಎಸ್ ಟ್ರಾವೆಲ್ಸ್ ಮತ್ತು ಲಾಜಿಸ್ಟಿಕ್ಸ್ ಸಂಸ್ಥೆ ಸ್ಥಾಪಿಸಿದ್ದರು. ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿದ್ದ ರಾಜಶೇಖರ್, ಆರಂಭದಲ್ಲಿ ಬುಕ್ಕಿಂಗ್ ಏಜೆಂಟ್, ಟ್ರಾವೆಲ್ ಏಜೆಂಟ್ ಹೀಗೆ ಹಲವು ರೀತಿಯ ಕೆಲಸಗಳನ್ನು ಮಾಡಿ ನಂತರ ಮೊದಲಿಗೆ ಒಂದು ಬಸ್ಸು ಕೊಂಡು ನಿಧಾನಕ್ಕೆ ತಮ್ಮ ಉದ್ಯಮವನ್ನು ಬೆಳೆಸಿ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಕರ್ನಾಟಕದಲ್ಲಿ ವಿಜಯ ಸಂಕೇಶ್ವರ್ ರಂತಹ ಪ್ರೊಫೆಷನಲ್ ಸಾರಿಗೆ ಮಾಲೀಕನ ಸ್ಪರ್ಧೆಯನ್ನು ಕೂಡ ಸಮರ್ಥ ವಾಗೀ ಎದುರಿಸಿ ವಿ ಆರ್ ಎಲ್ ಗೆ ಸಮಾನವಾಗಿ ಸಂಸ್ಥೆ ಕಟ್ಟಿದ್ದರು.
1971ರಲ್ಲಿ ಕೇವಲ ಒಂದು ಬಸ್ ಮೂಲಕ ಆರಂಭಿಸಲಾದ ಎಸ್ ಆರ್ ಎಸ್ ಸಂಸ್ಥೆ, ಇದೀಗ 3000 ಹೆಚ್ಚಿನ ಬಸ್‌ಗಳನ್ನು ಹೊಂದಿದೆ. ನಾಲ್ಕು ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿ, ನೂರಾರು ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸುತ್ತಿದೆ. ಬೆಂಗಳೂರು ಕೇಂದ್ರ ಕಚೇರಿಯಾಗಿದ್ದರೂ ಚೆನ್ನೈ, ಮುಂಬೈ, ವಿಜಯವಾಡ ಸೇರಿ ದೇಶದ ಇನ್ನಿತರ ನಗರಗಳಲ್ಲಿ ಶಾಖೆಗಳನ್ನು ಹೊಂದಿದೆ.
ಕೆ.ಟಿ.ರಾಜಶೇಖರ್ ತನ್ನ ಇಳಿವಯಸ್ಸಿನಲ್ಲೂ ಸದಾ ಕ್ರೀಯಾಶೀಲರಾಗಿ ಇರುತ್ತಿದ್ದರು. ಇತ್ತೀಚೆಗೆ ಅವರು ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಕಳೆದ 10 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಶುಕ್ರವಾರ ಬೆಳಗ್ಗೆ ಅಸುನೀಗಿದ್ದಾರೆ. ಮೃತರು ಮಗಳು ಮೇಘ ಮತ್ತು ಅಳಿಯ ದೀಪಕ್ ಮತ್ತು ಸಾವಿರಾರು ನೌಕರ ವೃಂದವನ್ನು ಅಗಲಿದ್ದಾರೆ.
ಎಸ್‌ಆರ್‌ಎಸ್ ಮಾಲೀಕರಾಗಿ ಸಾರಿಗೆ ಉದ್ಯಮಕ್ಕೆ ಅಡಿಯಿಟ್ಟಿದ್ದ ಕೆ.ಟಿ.ರಾಜಶೇಖರ್, ಉದ್ಯಮದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಲವು ಕಾರ್ಯಗಳ ಮೂಲಕ ಸಂಕಷ್ಟ ಸಮಯದಲ್ಲಿ ನೆರವು ನೀಡಿದ್ದರು. ಪ್ರಸ್ತುತ ಪ್ರವಾಸಿ ವಾಹನ ಮಾಲೀಕರ ಕೇಂದ್ರ ಒಕ್ಕೂಟದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು.