ಕೋವಿಡ್ ಟೆಸ್ಟ್ ರಿಪೋರ್ಟ್ ಇಲ್ಲವೆಂದು ಗರ್ಭಿಣಿಯನ್ನು ಅಡ್ಮಿಟ್ ಮಾಡಿಕೊಳ್ಳಲು ನಕಾರ | ಹೊರಗಡೆ ಆಟೋದಲ್ಲಿಯೇ ಪ್ರಸವ

ಕೋವಿಡ್-19 ಟೆಸ್ಟ್ ವರದಿ ಇಲ್ಲವೆಂದು ಗರ್ಭಿಣಿ ಒಬ್ಬರನ್ನು ಆಡ್ಮಿಟ್ ಮಾಡಿಕೊಳ್ಳಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ. ಆನಂತರ ಆ ಮಹಿಳೆ ಪ್ರಾಥಮಿಕ ಆರೋಗ್ಯ ಘಟಕದ ಮುಂಭಾಗ ಮಗುವೊಂದಕ್ಕೆ ಜನ್ಮ ನೀಡಿರುವ ಘಟನೆ ನಡೆದಿದೆ.

ಗುರುವಾರ ತಡರಾತ್ರಿ ಹಾಸನ ಜಿಲ್ಲೆಯ ಶಾಂತಿಗ್ರಾಮದ ಆ ಮಹಿಳೆಗೆ ಹೆರಿಗೆ ನೋವು ಕಾಣಿಸಿ ಕೊಂಡಿತ್ತು. ನಂತರ ಮಹಿಳೆಯ ಪತಿ ಹಾಗೂ ಮಾವ  ಆಕೆಯನ್ನು ಹಲಸಿನಹಳ್ಳಿಯಿಂದ ಶಾಂತಿಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಕೋವಿಡ್ ರಿಪೋರ್ಟ್ ಇಲ್ಲ ಎಂದು ಆಸ್ಪತ್ರೆಯವರು ಮಹಿಳೆಯನ್ನು ದಾಖಲಿಸಿಕೊಂಡಿಲ್ಲ. ಅಷ್ಟರಲ್ಲಿ ತಡವಾಗಿದೆ. ಆ ತಡ ರಾತ್ರಿ 12 ರ ಸುಮಾರಿಗೆ ಆಟೋರಿಕ್ಷಾದಲ್ಲಿಯೇ ಗಂಡು ಮಗುವಿಗೆ ಆ ಮಹಿಳೆ ಜನ್ಮ ನೀಡಿದ್ದಾರೆ.

ಸುದ್ದಿ ತಿಳಿದ ನಂತರ ಆಸ್ಪತ್ರೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ತಾಯಿ ಮತ್ತು ಶಿಶುವನ್ನು ಡೆಲಿವರಿ ವಾರ್ಡ್ ಗೆ ಸ್ಥಳಾಂತರಿಸಿದ್ದಾರೆ. ತಾಯಿ ಹಾಗೂ ಮಗು ಇಬ್ಬರು ಆರೋಗ್ಯದಿಂದ ಇರುವುದಾಗಿ ಮೂಲಗಳು ತಿಳಿಸಿವೆ.


ಆಸ್ಪತ್ರೆ ಮುಂಭಾಗ ಸೇರಿದ್ದ ಮಹಿಳೆಯ ಸಂಬಂಧಿಕರು ಹಾಗೂ ಗ್ರಾಮಸ್ಥರು, ಘಟನೆ ವಿರೋಧಿಸಿ ಪ್ರತಿಭಟನೆ ನಡೆಸಿದರು. ಘೋಷಣೆ ಕೂಗುವ ಮೂಲಕ ಆಸ್ಪತ್ರೆ ಸಿಬ್ಬಂದಿಯ ವರ್ತನೆಯನ್ನು ಖಂಡಿಸಿದರು. ಡ್ಯೂಟಿಯಲ್ಲಿದ್ದ ನರ್ಸ್ ಗಳನ್ನು ಅಮಾನತು ಮಾಡಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿಯನ್ನು ಒತ್ತಾಯಿಸಿದರು. ನಡೆದ ಇಡೀ ಘಟನೆಯನ್ನು ಆಟೋ ರಿಕ್ಷಾ ಚಾಲಕ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆಆ ಆರೋಪದ ಮೇರೆಗೆ ಆಟೋ ರಿಕ್ಷಾ ಚಾಲಕನ ವಿರುದ್ಧ  ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ರಾತ್ರಿ ಪಾಳಿಯಲ್ಲಿದ್ದ ನರ್ಸ್ ದೂರು ದಾದಾಖಲಿಸಿದ ಡ್ರಾಮಾ ಕೂಡ ನಡೆದಿದೆ.

Leave A Reply

Your email address will not be published.