ವಿಮಾನ ದುರಂತಕ್ಕೆ 11 ವರ್ಷ: ದ.ಕ. ಜಿಲ್ಲಾಡಳಿತದಿಂದ ಮೃತರಿಗೆ ಶ್ರದ್ಧಾಂಜಲಿ

ಮಂಗಳೂರು : ಮಂಗಳೂರು ವಿಮಾನ ದುರಂತ ಸಂಭವಿಸಿ ಇಂದಿಗೆ 11 ವರ್ಷಗಳು ಸಂದ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತದ ವತಿಯಿಂದ ನಗರದ ಕೂಳೂರು ತಣ್ಣೀರು ಬಾವಿ ಬಳಿಯ ಉದ್ಯಾನವನದಲ್ಲಿ ದ.ಕ. ಜಿಲ್ಲಾಡಳಿತದ ವತಿಯಿಂದ ಶ್ರದ್ಧಾಂಜಲಿಯನ್ನು ಏರ್ಪಡಿಸಲಾಯಿತು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಸೇರಿದಂತೆ ಹಲವರು ಪುಷ್ಪಾಂಜಲಿಯ ನಮನ ಸಲ್ಲಿಸಿದರು.

ವಿಮಾನದಲ್ಲಿ ಆರು ಸಿಬ್ಬಂದಿಗಳ ಜತೆ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ 166 ಮಂದಿ ಪ್ರಯಾಣಿಕರಲ್ಲಿ 158 ಮಂದಿ ಮೃತಪಟ್ಟಿದ್ದರು.

ದುರ್ಘಟನೆಯಲ್ಲಿ ಮೃತದೇಹಗಳು ಸುಟ್ಟು ಕರಕಲಾದ್ದರಿಂದ 10 ಮಂದಿ ಮೃತರ ಗುರುತು ಪತ್ತೆ ಅಸಾಧ್ಯವಾಗಿತ್ತು.

ಆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಆ ಮೃತದೇಹಗಳನ್ನು ಕೂಳೂರು- ತಣ್ಣೀರುಬಾವಿ ಬಳಿ ಸರ್ವಧರ್ಮಗಳ ಶಾಸ್ತ್ರ ಪ್ರಕಾರ ಅಂತ್ಯ ಸಂಸ್ಕಾರ ನಡೆಸಿತ್ತು.

ಇದೀಗ ಕಳೆದ ಆರು ವರ್ಷಗಳಿಂದ ದ.ಕ. ಜಿಲ್ಲಾಡಳಿತದ ವತಿಯಿಂದ ಈ ಉದ್ಯಾನವನದಲ್ಲಿ ದುರಂತದ ಮೃತರ ನೆನಪಿನಲ್ಲಿ ಶ್ರದ್ಧಾಂಜಲಿಯನ್ನು ನಡೆಸಲಾಗುತ್ತಿದೆ.

Leave A Reply

Your email address will not be published.