ಉಡುಪಿ | 5 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ : ಆರೋಪಿಗೆ 10 ವರ್ಷ ಶಿಕ್ಷೆ

Share the Article

ಉಡುಪಿ : ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ 5 ವರ್ಷದ ಬಾಲಕಿಯೋರ್ವಳಿಗೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಹೊರಡಿಸಿದೆ.

ಸಂತ್ರಸ್ತೆ ಬಾಲಕಿ ಅಪರಾಧಿಗೆ ಸೇರಿದ ಬಾಡಿಗೆ ಮನೆಯಲ್ಲಿ ತಂದೆ-ತಾಯಿ ಹಾಗೂ ಸೋದರನೊಂದಿಗೆ ವಾಸವಿದ್ದಳು. 2019 ಪೆಬ್ರವರಿ ತಿಂಗಳಿನಲ್ಲಿ ಅಪರಾಧಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಾಲಕಿ ತನ್ನ ತಾಯಿಗೆ ಈ ವಿಚಾರವನ್ನು ತಿಳಿಸಿದ್ದಳು. ತಾಯಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯ ಅಂದಿನ ಪಿಎಸ್ಐ ನಂಜಾ‌ ನಾಯ್ಕ್ ಆರೋಪಿಯನ್ನು ಬಂಧಿಸಿ ಪ್ರಾಥಮಿಕ ತನಿಖೆ ನಡೆಸಿದ್ದು ಅಂದಿನ ಕಾರ್ಕಳ ವೃತ್ತನಿರೀಕ್ಷಕ ವಿ.ಎಸ್. ಹಾಲಮೂರ್ತಿ ನ್ಯಾಯಾಲಯಕ್ಕೆ ದೋಷಾರೋಪಣ‌ ಪಟ್ಟಿ ಸಲ್ಲಿಸಿದ್ದರು. ಈಗ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಯು ಸಂತೋಷ್ ಕೆ. (35 ವರ್ಷ) ಎಂದು ತಿಳಿದುಬಂದಿದೆ.

ಉಡುಪಿಯ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದು, ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ ನ್ಯಾಯಾಧೀಶರಾದ ಎರ್ಮಾಳು ಕಲ್ಪನಾ ಅವರು ತೀರ್ಪು ಪ್ರಕಟಿಸಿದ್ದಾರೆ. ಅಪರಾಧಿ ಸಂತೋಷ್ ಗೆ ಪೋಕ್ಸೋ ಕಾಯ್ದೆಯಡಿ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 20 ಸಾವಿರ ದಂಡ ವಿಧಿಸಲಾಗಿದೆ. 20 ಸಾವಿರ ದಂಡದಲ್ಲಿ 15 ಸಾವಿರ ಸಂತ್ರಸ್ತ ಬಾಲಕಿಗೆ ಹಾಗೂ 5 ಸಾವಿರ ಹಣ ಸರ್ಕಾರಕ್ಕೆ ನೀಡಲು ಮತ್ತು 1 ಲಕ್ಷ ಮೊತ್ತವನ್ನು ಕಾನೂನು ಸೇವಾ ಪ್ರಾಧಿಕಾರದ ಮೂಲಕ ನೊಂದ ಸಂತ್ರಸ್ತೆಗೆ ನೀಡಲು ನ್ಯಾಯಾಲಯ ಆದೇಶಿಸಿದೆ.

Leave A Reply

Your email address will not be published.