Ad Widget

ಸುಳ್ಯ | ತುರ್ತು ಪರಿಸ್ಥಿತಿಯಲ್ಲಿ ಮಹಿಳೆಯನ್ನು 30 ಕಿ.ಮೀ. ದೂರ ತಲುಪಿಸಿ ಮಾನವೀಯತೆ ಮೆರೆದ ಕೊರೋನಾ ಕಾರ್ಯಪಡೆ ಸದಸ್ಯ ಚಂದ್ರಶೇಖರ ಕಡೋಡಿ

ದೇವಚಳ್ಳದ ಕೊರೋನಾ ಕಾರ್ಯಪಡೆಯ ಸದಸ್ಯ ಚಂದ್ರಶೇಖರ ಕಡೋಡಿ ಎನ್ನುವವರು ಸಂಕಷ್ಟದ ಸಮಯದಲ್ಲಿ ಮಹಿಳೆಯರನ್ನು ಸುಳ್ಯಕ್ಕೆ ತಲುಪಿಸುವ ಮುಖಾಂತರ ಮಾನವೀಯತೆ ಮೆರೆದಿದ್ದಾರೆ.

ಇವರು ಮಹಿಳೆಯನ್ನು ದೇವಚಳ್ಳ ಗ್ರಾಮದ ಕಂದ್ರಪ್ಪಾಡಿಯಿಂದ ಸುಳ್ಯಕ್ಕೆ ತನ್ನ ಬೈಕ್ ಮುಖಾಂತರ ತಲುಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನಡೆದದ್ದು ಏನು..?

ಸುಬ್ರಮಣ್ಯ ಕಳಿಗೆಯ ರವಿಯವರ ಪತ್ನಿ ಚೈತ್ರರವರು ನಿನ್ನೆ ಹೆರಿಗೆ ನೋವಿನಿಂದ ಸುಳ್ಯ ಕೆ ವಿ ಜಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಹೆರಿಗೆಗೆ ಇನ್ನೂ ಸಲ್ಪ ದಿನವಿದ್ದ ಕಾರಣ ಅವರ ಜೊತೆಗೆ ಪತಿ ಮಾತ್ರ ಆಸ್ಪತ್ರೆಯಲ್ಲಿ ಇದ್ದರು. ಆದರೆ ಚೈತ್ರರವರ ಆರೋಗ್ಯದಲ್ಲಿ ದಿಢೀರ್ ಬದಲಾವಣೆ ಆದ ಕಾರಣ ವೈದ್ಯರು ತಕ್ಷಣ ಶಸ್ರಚಿಕಿಸ್ತೆ ಮಾಡಬೇಕು ಎಂದು ಸೂಚಿಸಿದರು. ಹೆರಿಗೆಯ ತಕ್ಷಣ ಬಾಣಂತಿ ಜೊತೆಗೆ ಮಹಿಳೆಯೊಬ್ಬರು ಬೇಕು ಎಂದು ಡಾಕ್ಟರ್ ಸಲಹೆ ನೀಡಿದರು.

ಚೈತ್ರರವರ ತಾಯಿ ದೇವಚಳ್ಳ ಗ್ರಾಮದ ಕಂದ್ರಪ್ಪಾಡಿಯಲ್ಲಿ ವಾಸವಾಗಿದ್ದರು. ಈ ಸಂದರ್ಭದಲ್ಲಿ ಸುಳ್ಯಕ್ಕೆ ತಕ್ಷಣವೇ ತಲುಪಿಸಲು ಸಹಕಾರ ಬೇಕು ಎಂದು ಮನೆಯವರು ಆರೋಗ್ಯ ಸಹಾಯಕಿ ಜಲಜಾಕ್ಷಿ ಮತ್ತು ಆಶಾಕಾರ್ಯಕರ್ತೆ ಪ್ರಮೀಳಾರವರನ್ನು ಸಂಪರ್ಕ ಮಾಡಿದಾಗ ಇವರುಗಳು ಕೊರೋನಾ ಕಾರ್ಯಪಡೆ ಸದಸ್ಯ ಚಂದ್ರಶೇಖರ ಕಡೋಡಿಯವರನ್ನು ವಿನಂತಿಸಿದರು. ಸಮಸ್ಯೆಯನ್ನು ಅರಿತ ಚಂದ್ರಶೇಖರ ಅವರು ತಕ್ಷಣವೇ ತನ್ನ ಬೈಕ್ ನಲ್ಲಿ ಕಂದ್ರಪ್ಪಾಡಿಯಿಂದ 30 ಕಿಲೋಮೀಟರ್ ದೂರದ ಸುಳ್ಯಕ್ಕೆ ಅರ್ಧಗಂಟೆಯಲ್ಲಿ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. ಚೈತ್ರರವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ.‌ ಈ ಕಾರ್ಯವು ದೇವಚಳ್ಳ ಪಂಚಾಯತ್, ಪೊಲೀಸ್ ಇಲಾಖೆ ಮತ್ತು ತಹಶೀಲ್ದಾರ್ ಅನಿತಾಲಕ್ಷ್ಮಿ ಅವರು ಸಹಕಾರ ನೀಡಿದ್ದರಿಂದ ಸಾಧ್ಯವಾಯಿತು ಎನ್ನುತ್ತಾರೆ ಚಂದ್ರಶೇಖರ ಕಡೋಡಿ.

Leave a Reply

error: Content is protected !!
Scroll to Top
%d bloggers like this: