ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಮುನ್ನಡೆ | ನಂದಿ ಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ ಹಿನ್ನಡೆ | ತಮಿಳುನಾಡಿನಲ್ಲಿ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈಗೆ ಹಿನ್ನಡೆ
ಇಡೀ ದೇಶವೇ ಕುತೂಹಲದಿಂದ ಗಮನಿಸುತ್ತಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಜಿದ್ದಾ ಜಿದ್ದಿನ ಸ್ಪರ್ಧೆ ನಡೆಯುತ್ತಿದೆ. ಎರಡು ಪಕ್ಷಗಳ ನಡುವೆ ಹಾವು ಏಣಿ ಆಟ ನಡೆಯುತ್ತಿದ್ದರೂ ಈಗಿನ ಸುತ್ತಿನ ಒಂದು ಚುನಾವಣಾ ಸುತ್ತು ಮುಗಿದಾಗ ಟಿಎಂಸಿ ಖಚಿತ ಮುನ್ನಡೆ ಸಾಧಿಸುತ್ತಿದೆ.
ಆದರೆ ವಿಶೇಷವಾಗಿ ನಂದಿ ಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಆರಂಭದ ಸುತ್ತಿನಲ್ಲಿ ಹಿನ್ನಡೆಯಾಗಿದ್ದು, ಆಕೆಯ ಮಾಜಿ ಶಿಷ್ಯ ಸುವೇಂದು ಅಧಿಕಾರಿ ಮುನ್ನಡೆ ಸಾಧಿಸಿದ್ದಾರೆ.
ಇದೀಗ ಪಶ್ಚಿಮ ಬಂಗಾಳದಲ್ಲಿ ಒಟ್ಟು 292 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಟಿಎಂಸಿ 189 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 100 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಕೇವಲ 6 ಸೀಟುಗಳಲ್ಲಿ ಮಾತ್ರ ಮುನ್ನಡೆಯಲ್ಲಿದೆ. 2016ರ ಚುನಾವಣೆಯಲ್ಲಿ ಟಿಎಂಸಿ 211 ಕ್ಷೇತ್ರಗಳಲ್ಲಿ ಜಯಗಳಿಸಿದರೆ ಕಾಂಗ್ರೆಸ್ 44 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಬಿಜೆಪಿ ಕೇವಲ 3 ಸ್ಥಾನಗಳನ್ನಷ್ಟೆ ಪಡೆದಿತ್ತು.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳ ಅಂಗಡಿ ಅವರು ನಾಲ್ಕು ಸಾವಿರ ಮತಗಳ ಅಂತರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ಸತೀಶ್ ಜಾರಕಿಹೊಳಿ ಅವರಿಗಿಂತ 2ನೇ ಸುತ್ತಿನ ಮತ ಎಣಿಕೆ ಮುಗಿದ ನಂತರ ಮುನ್ನಡೆಯಲ್ಲಿ ಇದ್ದಾರೆ.
ಮಸ್ಕಿಯಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ. ಚುನಾವಣಾ ಫಲಿತಾಂಶ ಇನ್ನು ಬರದಿದ್ದರೂ ಮಸ್ಕಿಯಲ್ಲಿ ಬಿಜೆಪಿಯ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅವರು ಸೋಲನ್ನಪ್ಪಿಕೊಂಡಿದ್ದಾರೆ. ಬಸವಕಲ್ಯಾಣದಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ.
ಅಸ್ಸಾಂ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಗತಿಯಲ್ಲಿದ್ದು, ಒಟ್ಟು 126 ಸ್ಥಾನಗಳ ಪೈಕಿ ಬಿಜೆಪಿ 69 ಸ್ಥಾನಗಳನ್ನು ಕಾಂಗ್ರೆಸ್ 38 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ತಮಿಳುನಾಡಿನಲ್ಲಿ ಡಿಎಂಕೆ ನಾಗಾಲೋಟದಲ್ಲಿ ಓಡುತ್ತಿದ್ದು, ಬಹುಮತದ ಸನಿಹದಲ್ಲಿದೆ. ಕಮಲಹಾಸನ್ ಖುಷ್ಬು ಮತ್ತು ಅನ್ನಮಲೈ ಹಿನ್ನಡೆ ಅನುಭವಿಸುತ್ತಿದ್ದಾರೆ.
ಕೇರಳದಲ್ಲಿ 140 ಸೀಟುಗಳ ವಿಧಾನಸಭಾ ಕ್ಷೇತ್ರದಲ್ಲಿ, ಎಲ್ಡಿ ಎಫ್ 90 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಪುದುಚೇರಿಯ 30 ವಿಧಾನಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳ ಮತ ಎಣಿಕೆ ಪ್ರಗತಿಯಲ್ಲಿದ್ದು ಬಿಜೆಪಿ 10 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ.
ಕೇರಳದಲ್ಲಿ ಬಿಜೆಪಿ ಕೇವಲ ಒಂದು ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಕೇರಳದಲ್ಲಿ ಒಟ್ಟಾರೆಯಾಗಿ ಎಡಪಕ್ಷಗಳು ಕಂಪ್ಲೀಟ್ ಸ್ವೀಟ್ ಮಾಡಿಕೊಂಡು ಮುನ್ನುಗ್ಗುತ್ತಿವೆ. ಭಾರಿ ಪ್ರಚಾರ ಮತ್ತು ಹಟದಿಂದ ಕಣಕ್ಕಿಳಿದಿದ್ದ ಬಿಜೆಪಿಗೆ ಕೇರಳದಲ್ಲಿ ಹೀನಾಯ ಸೋಲು ಖಚಿತ.