ಕೊರೊನಾ ಸೋಂಕಿತರನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ಗೆ ವಾಹನ ಡಿಕ್ಕಿಯಾಗಿ ಆಂಬುಲೆನ್ಸ್ನಲ್ಲಿ ಬೆಂಕಿ: ಇಬ್ಬರ ಸಾವು
ಕೊರೊನಾ ಸೋಂಕಿತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಆಂಬುಲೆನ್ಸ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರು ಗಾಯಾಳುಗಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಘಟನೆಯಿಂದ ಮೃತಪಟ್ಟವರನ್ನು ಹಸೀನಾ (40) ಹಾಗೂ ಸಾದಿಕ್ (23) ಎಂದು ಗುರುತಿಸಲಾಗಿದೆ.
ಘಟನೆಯಿಂದ ಕೊರೊನಾ ಸೋಂಕಿತೆ ಹಸೀನಾಗೆ ಸುಟ್ಟ ಗಾಯಗಳಾಗಿದ್ದವು, ಹಸೀನಾ ಸಂಬಂಧಿ ಸಾದಿಕ್ ಅವರ ತಲೆಗೆ ತೀವ್ರಗಾಯಗಳಾಗಿತ್ತು.
ತಕ್ಷಣ ಇಬ್ಬರನ್ನು ಮತ್ತೊಂದು ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ.
ಏನಿದು ಘಟನೆ
ಶುಕ್ರವಾರ ಕೋರೊನಾ ಸೋಂಕಿತೆ ಹಸಿನಾ ಸೇರಿ 5 ಮಂದಿ ಆಂಬ್ಯುಲೆನ್ಸ್ನಲ್ಲಿ ಚಲಿಸುತ್ತಿದ್ದಾಗ ಆಂಬ್ಯುಲೆನ್ಸ್, ಕಂಟೇನರ್ಗೆ ಡಿಕ್ಕಿಯಾಗಿತ್ತು. ಈ ಸಂಧರ್ಭದಲ್ಲಿ ಆಂಬ್ಯುಲೆನ್ಸ್ಗೆ ಹಿಂಬದಿಯಿಂದ ಮತ್ತೊಂದು ಕಾರು ಡಿಕ್ಕಿಯಾದ ಪರಿಣಾಮ ಆಂಬ್ಯುಲೆನ್ಸ್ ಧಗಧಗನೆ ಹೊತ್ತಿ ಉರಿಯಿತು. ನೆಲಮಂಗಲದ ದಾಬಸ್ ಪೇಟೆ ಸಮೀಪದ ಎಡೇಹಳ್ಳಿಯಲ್ಲಿ ಅವಘಡ ಸಂಭವಿಸಿತ್ತು.
ಘಟನೆ ಬೆನ್ನಲ್ಲೇ ಸ್ಥಳೀಯರು ಟ್ಯಾಂಕರ್ ವಾಹನದಿಂದ ಬೆಂಕಿ ನಂದಿಸಿದರು. ಕೂಡಲೇ ಮತ್ತೊಂದು ಆಂಬುಲೆನ್ಸ್ ವಾಹನದ ಮೂಲಕ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಹಸಿನಾ ಮತ್ತು ಸಾದಿಕ್ ಸಾವಿಗೀಡಾಗಿದ್ದಾರೆ.
ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.