ವೆನ್ಲಾಕ್ ಕೋವಿಡ್ ವಾರ್ಡ್ ಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ | ಅವಶ್ಯವಿದ್ದಲ್ಲಿ 50 ಸ್ಟಾಫ್ ನರ್ಸ್‌ಗಳ ನೇಮಕಕ್ಕೆ ಸೂಚನೆ
ಮಂಗಳೂರು: ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಕೋವಿಡ್ ವಾರ್ಡ್ ಗೆ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಯವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿ, ಕೋವಿಡ್ ಸೋಂಕಿತರೊಂದಿಗೆ ಮಾತನಾಡಿದರು.
ಈ ಸಂದರ್ಭ ಚಿಕಿತ್ಸೆ, ಮೂಲ ಸೌಕರ್ಯಗಳ ಬಗ್ಗೆ ಸೋಂಕಿತರೊಂದಿಗೆ ಮಾಹಿತಿ ಪಡೆದು ಯೋಗಕ್ಷೇಮ ವಿಚಾರಿಸಿದರು.
ಬಳಿಕ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಯವರು ವೆನ್ಲಾಕ್ ಆಸ್ಪತ್ರೆಯ ಕುಂದುಕೊರತೆ ವಿಚಾರಿಸಿದರು.
ಈ ಸಂದರ್ಭ ವೆನ್ಲಾಕ್ ಆಸ್ಪತ್ರೆಯ ಮೊದಲ ಮಹಡಿಯಲ್ಲಿನ ಡಯಾಲೀಸಿಸ್ ಕೊಠಡಿ ಸಹಿತ ಸಸ್ಪೆಕ್ಡ್ ವಾರ್ಡನ್ನು ಹಳೆಯ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕು. 15 ವೆಂಟಿಲೇಟರ್ ಸಾಮರ್ಥ್ಯದ ಐಸಿಯುವನ್ನು 50 ವೆಂಟಿಲೇಟರ್ ಐಸಿಯುವಾಗಿ ಪರಿವರ್ತಿಸಬೇಕು ಎಂದು ವೆನ್ಲಾಕ್ ನ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಅವಶ್ಯಕತೆ ಇದ್ದಲ್ಲಿ 50 ಸ್ಟಾಫ್ ನರ್ಸ್ ಗಳ ನೇಮಕಾತಿ ನಡೆಸುವಂತೆ ಆದೇಶಿಸಿದರು. ರೋಗ ಲಕ್ಷಣಗಳಿಲ್ಲದ, ರೋಗಲಕ್ಷಣಗಳಿಂದ ಗುಣ ಮುಖರಾಗಿರುವ ಕೊರೊನಾ ಸೋಂಕಿತರನ್ನು 10 ದಿನಗಳು ಪೂರ್ಣಗೊಂಡ ಬಳಿಕ ಇಎಸ್ಐ ಆಸ್ಪತ್ರೆಗೆ ಸ್ಥಳಾಂತರಿಸಲು ಜಿಲ್ಲಾಧಿಕಾರಿಯವರು ಸೂಚನೆ ನೀಡಿದರು.