ಪುತ್ತೂರಿನಲ್ಲಿ ಶಿಸ್ತಿನಿಂದ ಮಾಸ್ಕ್ ಧರಿಸಿ ಪೇಟೆಗೆ ಬಂದ ನಾಯಿ !

Share the Article

ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಅಂತಾ ಸರ್ಕಾರ ಕಠಿಣ ನಿಯಮ ಮಾಡಿದ್ದರೂ ಜನ ಮಾತ್ರ  ಇನ್ನೂ ಮಾಸ್ಕ್ ಧರಿಸಲು ಮೀನ ಮೇಷ-ಬೇಶ ಬರಲು ಕಾಯುತ್ತಿದ್ದಾರೆ. ಮಾಸ್ಕ್ ಬಳಕೆಯ ಗಂಭೀರತೆ ಇನ್ನೂ ನಮ್ಮ ಜನರಿಗೆ ಅರ್ಥವಾಗಿಲ್ಲ ಅನ್ನಿಸುತ್ತದೆ. ಆದರೆ ಇಲ್ಲೊಂದು ನಾಯಿ, ನಿಯತ್ತಿನಿಂದ ಮಾಸ್ಕ್ ಧರಿಸಿಕೊಂಡು ಹೊರಗಡೆ ಬರುತ್ತೆ.

ಪುತ್ತೂರಿನ ಶ್ವಾನದ ಮಾಲಿಕರೊಬ್ಬರು ತನ್ನ ಪ್ರೀತಿಯ ಶ್ವಾನಕ್ಕೆ ಮಾಸ್ಕ್ ಹಾಕಿಸಿ ಹೊರಗೆ ಕರೆದುಕೊಂಡು ಬಂದಿದ್ದರು. ಗುರುವಾರ ಅಗತ್ಯ ವಸ್ತುಗಳ ಖರೀದಿ ಸಮಯದಲ್ಲಿ ಪಟ್ಟಣದಲ್ಲಿ ನಾಯಿ ಮಾಸ್ಕ್ ಧರಿಸಿ ಎಲ್ಲರ ಆಕರ್ಷಣೆಗೆ ಕಾರಣವಾಗಿತ್ತು, ಅಷ್ಟೇ ಅಲ್ಲ, ಮಾಸ್ಕ್ ಧರಿಸಲು ಪ್ರೇರೇಪಿಸುವ ರಾಯಭಾರಿಯ ತರಹ ಪೇಟೆಯಲ್ಲಿ ಮಾಸ್ಕ್ ಮಹತ್ವ ಸಾರಿ ಹೇಳಿತು.

ಪುತ್ತೂರು ಪೇಟೆಯ ದರ್ಬೆ ನಿವಾಸಿ, ಪ್ರವೀಣ್ ಡ್ರೈವಿಂಗ್ ಸ್ಕೂಲ್‌ನ ಮಾಲೀಕ ಪ್ರವೀಣ್ ಡಿಸೋಜಾ ಅವರೇ ತಮ್ಮ ನಾಯಿಗೆ ಮಾಸ್ಕ್ ಹಾಕಿಸಿ ಕರೆದುಕೊಂಡು ಬಂದವರು. ಜನತಾ ಕರ್ಫ್ಯೂ ವೇಳೆ ಬೆಳಗ್ಗಿನ 10 ಗಂಟೆಯವರೆಗಿನ ಸಮಯಾಕಾಶದಲ್ಲಿ ತನ್ನ ಪ್ರೀತಿಯ ನಾಯಿಯನ್ನು ಪ್ರವೀಣ್ ತನ್ನ ದ್ವಿಚಕ್ರದಲ್ಲಿ ಕೂರಿಸಿಕೊಂಡು ಬಂದಿದ್ದು, ಎಲ್ಲರ ಕುತೂಹಲ ಕೇಂದ್ರವಾಗಿದ್ದಾರೆ. ನಾಯಿಗೂ ಕೊರೊನಾ ತಗುಲಬಾರದು ಎನ್ನುವ ದೃಷ್ಠಿಯಿಂದ ಮಾಸ್ಕ್ ಹಾಕಿಸಿ ಪ್ರವೀಣ್ ಪೇಟೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ನಾಯಿಯ ಸೇಫ್ಟಿ ತೆಗೆದುಕೊಳ್ಳುವುದರ ಜತೆಗೆ, ಮಾಸ್ಕ್ ಧಿಕ್ಕರಿಸಿ ಬೀಡಾಡಿಯಂತೆ ಓಡಾಡುವ ಜನರಿಗೆ ಪಾಠ ಮಾಡಿಸಿದ ಹಾಗಾಗಿದೆ.

ಎರಡು ವರ್ಷದ ಹಗ್ ತಳಿಯ ನಾಯಿಯೂ ಯಾವುದೇ ಅಡ್ಡಿಯಿಲ್ಲದೆ, ಕಿರಿ-ಕಿರಿ ಯಿಲ್ಲದೆ ಮಾಸ್ಕ್ ಹಾಕಿಕೊಂಡಿದೆ. ಮಾಸ್ಕ್ ಹಾಕಿದರೆ ಕಿರಿ-ಕಿರಿಯಾಗುತ್ತದೆ, ಉಸಿರಾಟಕ್ಕೆ ತೊಂದೆಯಾಗುತ್ತದೆ ಅನ್ನುವ ಜನರಿಗೆ ನಾಯಿ ಮಾದರಿಯಾಗಿದೆ. ನಾಯಿಯ ಮಾಲೀಕ ಪ್ರವೀಣ್ ಮೊದಲಿನಿಂದಲೂ ತಾನೂ ಮಾಸ್ಕ್ ಧರಿಸಿ ನಾಯಿಗೂ ಮಾಸ್ಕ್ ಹಾಕಿ ಪೇಟೆಗೆ ಕರೆದುಕೊಂಡು ಬರೋದನ್ನು ರೂಢಿ ಮಾಡಿಕೊಂಡಿದ್ದಾರೆ. ಹೀಗಾಗಿ ನಾಯಿ ಕೂಡಾ ತನ್ನೋಡೆಯನನ್ನೆ ಫಾಲೋ ಮಾಡಿ ಬಹಳ ಪ್ರೀತಿಯಿಂದ ಮಾಸ್ಕ್ ಧರಿಸಲು ಒಪ್ಪುತ್ತದೆ.

Leave A Reply

Your email address will not be published.