ತಪಾಸಣೆ ವೇಳೆ ಪೊಲೀಸ್ ವಾಹನಕ್ಕೆ ಟಿಪ್ಪರ್ ಢಿಕ್ಕಿಯಾಗಿ ಪೊಲೀಸ್ ಮೃತ್ಯು
ರಸ್ತೆ ಬದಿಯಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದ ವೇಳೆ ಎಂ ಸ್ಯಾಂಡ್ ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಲಾರಿಯೊಂದು ಪೊಲೀಸ್ ವ್ಯಾನ್ ಗೆ ಢಿಕ್ಕಿ ಹೊಡೆದು, ಬಳಿಕ ವ್ಯಾನ್ ಮೇಲೆಯೇ ಉರುಳಿಬಿದ್ದ ಪರಿಣಾಮ ಪೊಲೀಸ್ ಪೇದೆ ಸಾವನ್ನಪ್ಪಿದ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ನಂಜನಗೂಡು-ಗುಂಡ್ಲುಪೇಟೆ ರಸ್ತೆ ಕಡುಬನಕಟ್ಟೆ (ಮುದ್ದಹಳ್ಳಿ) ಗೇಟ್ ಬಳಿ ಈ ಅಪಘಾತ ಸಂಭವಿಸಿದ್ದು, ಪೊಲೀಸ್ ಪೇದೆ ಸಿದ್ದರಾಜ ನಾಯ್ಕ (32) ಮೃತಪಟ್ಟಿದ್ದಾರೆ.
ಸಶಸ್ತ್ರ ಮೀಸಲು ಪಡೆ ಪೊಲೀಸ್ ಪೇದೆಯಾದ ಇವರನ್ನು ನಂಜನಗೂಡು ನಗರದ ಪೊಲೀಸ್ ಇಂಟರ್ ಸೆಪ್ಟರ್ ವ್ಯಾನ್ ಚಾಲಕನಾಗಿ ನಿಯೋಜನೆ ಗೊಳಿಸಲಾಗಿತ್ತು. ಎಂದಿನಂತೆ ಸೋಮವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಸಿದ್ದರಾಜ ನಾಯ್ಕ ಎಎಸ್ಐ ಜೊತೆಯಲ್ಲಿ ವಾಹನ ತಪಾಸಣೆಗೆ ತೆರಳಿದ್ದರು. ಎಎಸ್ಐ ಶಿವಕುಮಾರ್ ಎಂಬವರು ಕೆಳಗೆ ಇಳಿದು ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು.
ಚಾಲಕ ಸಿದ್ದರಾಜನಾಯ್ಕ ಪೊಲೀಸ್ ಇಂಟರ್ ಸೆಪ್ಟರ್ ವಾಹನದ ಒಳಗೆ ಕುಳಿತುಕೊಂಡು ಮೊಬೈಲ್ ನೋಡುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಗುಂಡ್ಲುಪೇಟೆ ಕಡೆಯಿಂದ ಎಂ ಸ್ಯಾಂಡ್ ತುಂಬಿಕೊಂಡು ನಂಜನಗೂಡು ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿ ಪೊಲೀಸ್ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಲಾರಿಯಲ್ಲಿ ತುಂಬಿಕೊಂಡಿದ್ದ ಎಂ ಸ್ಯಾಂಡ್ ಪೊಲೀಸ್ ವಾಹನದ ಮೇಲೆ ಮಗುಚಿಕೊಂಡಿದೆ.
ಪರಿಣಾಮ ಪೊಲೀಸ್ ವಾಹನದೊಳಗಿದ್ದ ಪೇದೆ ಸಿದ್ದರಾಜ ನಾಯ್ಕ ಸಿಲುಕಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಕ್ಷಣ ಎಎಸ್ಐ ಶಿವಕುಮಾರ್ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಜೆಸಿಬಿ ತರಿಸಿ ವಾಹನವನ್ನು ಬಿಡಿಸಿದರಾದರೂ ಸಹದ್ಯೋಗಿ ಪೇದೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಸ್ಥಳಕ್ಕೆ ನಂಜನಗೂಡು ಸಂಚಾರ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಲೋಹಿತ್ ಧಾವಿಸಿ ಪರಿಶೀಲನೆ ನಡೆಸಿದರು. ಈ ಸಂಬಂಧ ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.