18 + ಕೋವಿಡ್ ಲಸಿಕೆ : ರಾಜ್ಯಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ
ಕೊರೋನ ಸೋಂಕಿನ ಪ್ರಕರಣಗಳ ತೀವ್ರ ಏರಿಕೆಯ ನಡುವೆ ಮೇ 1ರಿಂದ ನೂತನ 3ನೇ ಹಂತದ ಲಸಿಕೆ ನೀಡಿಕೆ ಕಾರ್ಯತಂತ್ರದ ಪರಿಣಾಮಕಾರಿ ಅನುಷ್ಠಾನಕ್ಕೆ ರಾಜ್ಯ ಸರಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗದರ್ಶನ ನೀಡಲು ಕೇಂದ್ರ ಆರೋಗ್ಯ ಸಚಿವ ರಾಜೇಶ್ ಭೂಷಣ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಉನ್ನತ ಮಟ್ಟದ ಸಭೆ ನಡೆಯಿತು.
ಯಾವುದೇ ತಪ್ಪು ದತ್ತಾಂಶ ಇಡೀ ವ್ಯವಸ್ಥೆಯ ಸಮಗ್ರತೆಗೆ ಧಕ್ಕೆ ಉಂಟು ಮಾಡುತ್ತದೆ. ಆದುದರಿಂದ ಸರಿಯಾದ ಹಾಗೂ ಕಾಲಕ್ಕನುಗುಣವಾದ ದತ್ತಾಂಶವನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಅಪ್ಲೋಡ್ ಮಾಡುವ ಪ್ರಾಮುಖ್ಯತೆ ಬಗ್ಗೆ ಕೇಂದ್ರ ಸರಕಾರ ಸಭೆಯ ಸಂದರ್ಭ ಬೆಳಕು ಚೆಲ್ಲಿತು.
ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಲಸಿಕೆಯನ್ನು ನೇರವಾಗಿ ಖರೀದಿಸುವ ಬಗ್ಗೆ ಆದ್ಯತೆಯಾಗಿ ನಿರ್ಧಾರ ತೆಗೆದುಕೊಳ್ಳಲು ಹಾಗೂ 18ರಿಂದ 45 ವರ್ಷದ ಒಳಗಿನವರಿಗೆ ಆನ್ಲೈನ್ ನೋಂದಣಿ ಸೌಲಭ್ಯದ ಬಗ್ಗೆ ಪ್ರಚಾರ ಮಾಡುವಂತೆ ಸೂಚಿಸಿತು.
ಅರ್ಹ ಜನರಿಗೆ ಲಸಿಕೆ ನೀಡಲು ನಿಗದಿಪಡಿಸಲಾದ ದಿನವನ್ನು ವೆಬ್ಸೈಟ್ ಮೂಲಕ ಒದಗಿಸುವಂತೆ ಹಾಗೂ ಸಿವಿಸಿಯಲ್ಲಿ ಪರಿಣಾಮಕಾರಿ ಜನಸಂದಣಿ ನಿಯಂತ್ರಣಕ್ಕೆ ಕಾನೂನು ಹಾಗೂ ಸುವ್ಯವಸ್ಥೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವಂತೆ ತಿಳಿಸಿತು.
ಸಮಗ್ರ ಯೋಜನೆಯನ್ನು ಅನುಷ್ಠಾನಗೊಳಿಸಲು ಹಾಗೂ ಸಿದ್ಧತೆ ಕೈಗೊಳ್ಳಲು ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಈ ಕೆಳಗಿನ ಸಲಹೆಗಳನ್ನು ನೀಡಿದೆ.
ಹೆಚ್ಚುವರಿ ಮೀಸಲಾದ ಕೋವಿಡ್-19 ಆಸ್ಪತ್ರೆಗಳನ್ನು ಗುರುತಿಸುವುದು ಹಾಗೂ ಸರಕಾರಿ, ಖಾಸಗಿ ವಲಯದಲ್ಲಿ ಡಿಆರ್ಡಿಒ, ಸಿಎಸ್ಐಆರ್ ಅಥವಾ ಅದೇ ರೀತಿಯ ಸಂಸ್ಥೆಗಳಿಂದ ಫೀಲ್ಡ್ ಆಸ್ಪತ್ರೆಗಳನ್ನು ಸಿದ್ದಗೊಳಿಸಬೇಕು.
ಆಮ್ಲಜನಕ ಆಧಾರದ ಹಾಸಿಗೆ, ಐಸಿಯು ಹಾಸಿಗೆ ಹಾಗೂ ಆಮ್ಲಜನಕ ಪೂರೈಯ ಸಮರ್ಪಕತೆಯ ಖಾತರಿ ನೀಡಬೇಕು. ರೋಗಿಗಳನ್ನು ನಿರ್ವಹಿಸಲು ವೈದ್ಯರಿಗೆ ಹಾಗೂ ನರ್ಸ್ಗಳಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡುವುದರೊಂದಿಗೆ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ನಿಯೋಜಿಸಬೇಕು ಹಾಗೂ ಆ್ಯಂಬುಲೆನ್ಸ್ ಸೇವೆಯನ್ನು ಸಶಕ್ತಗೊಳಿಸಬೇಕು.
ಹೆಚ್ಚುವರಿ ಆ್ಯಂಬುಲೆನ್ಸ್ಗಳನ್ನು ನಿಯೋಜಿಸುವ ಮೂಲಕ ಮೂಲಸೌಕರ್ಯದ ಕೊರತೆ ಹೊಂದಿರುವ ಜಿಲ್ಲೆಗಳಿಗೆ ಸಾಕಷ್ಟು ಉಲ್ಲೇಖಿತ ಸಂಪರ್ಕಗಳನ್ನು ಸ್ಥಾಪಿಸಬೇಕು. ಹಾಸಿಗೆಗಳ ಹಂಚೆಕೆಯ ಸೇವೆಗೆ ಕೇಂದ್ರೀಕೃತ ಕಾಲ್ ಸೆಂಟರ್ ಆರಂಭಿಸಬೇಕು. ಹಾಸಿಗೆ ಲಭ್ಯವಿರುವ ವಾಸ್ತವ ಸಮಯವನ್ನು ನಿರ್ವಹಿಸುವುದು ಹಾಗೂ ಜನಸಾಮಾನ್ಯರಿಗೆ ಅದು ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕು.
ಮಾರ್ಗಸೂಚಿಗಳನ್ನು ರೂಪಿಸುವುದು ಹಾಗೂ ಕೊವಿಡ್ -19ಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು.