ಕಡಬ | ಮೇಯಲು ಬಿಟ್ಟ ಆಡಿನ ಮೇಲೆ ಹಗಲಿನ ಹೊತ್ತಿನಲ್ಲೇ ಚಿರತೆ ದಾಳಿ
ಕಡಬ ತಾಲೂಕಿನ ಮರ್ದಾಳದ ಐತ್ತೂರು ಗ್ರಾಮದಲ್ಲಿ ಮೇಯುತ್ತಿದ್ದ ಆಡಿನ ಮೇಲೆ ಹಠಾತ್ತನೆ ಚಿರತೆ ದಾಳಿಮಾಡಿ ಪರಾರಿಯಾದ ಘಟನೆ ಇಂದು ಸಂಜೆ ನಡೆದಿದೆ.
ಐತ್ತೂರು ಗ್ರಾಮದ ಕೋಕಲ ರಾಘವ ಪೂಜಾರಿ ಎಂಬವರು ತನ್ನ ಮೂರು ಆಡುಗಳನ್ನು ಮೇಯಲು ಪಕ್ಕದಲ್ಲಿರುವ ಅಡ್ಕದಲ್ಲಿ ಬಿಟ್ಟಿದ್ದರು. ಮೇಯಲು ಬಿಟ್ಟಿದ್ದ ಆಡುಗಳನ್ನು ವಾಪಾಸು ಮನೆಗೆ ಕರೆತರಲು ರಾಘವ ಅವರ ಮಗ ಧನಂಜಯ ಅಲ್ಲಿಗೆ ತೆರಳುವಾಗ ಈ ಘಟನೆ ಸಂಭವಿಸಿದೆ.
ಸಂಜೆ ಸುಮಾರು 5:30 ರ ಸಮಯಕ್ಕೆ ಪೊದೆಯಂಚಿನಿಂದ ಧುಮುಕಿ ಬಂದ ಚಿರತೆಯು ಇದ್ದುದರಲ್ಲಿ ದೊಡ್ಡ ಆಡಿನ ಮೇಲೆ ದಾಳಿಮಾಡಿದೆ. ಆಗ ಪದ್ಮನಾಭ ಅವರು ಜೋರಾಗಿ ಕೂಗಿಕೊಂಡಿದ್ದಾರೆ. ಆಗ ಚಿರತೆ ಗಾಬರಿಯಿಂದ ಓಡಿ ಹೋಗಿದೆ.
ಪಕ್ಕದಲ್ಲಿ ಇರುವ ರಬ್ಬರ್ ನಿಗಮದ ರಬ್ಬರ್ ತೋಟ ವಿಶಾಲವಾಗಿದ್ದು ಅಲ್ಲಿನ ಪೊದೆಗಳ ಒಳಗೆ ಚಿರತೆ ಅಡಗಿರಬಹುದು ಎಂದು ಗ್ರಾಮಸ್ಥರು ಸಂಶಯ ಪಡುತ್ತಿದ್ದಾರೆ. ರಾತ್ರಿಯ ಹೊತ್ತಲ್ಲಿ ಒಬ್ಬೊಬ್ಬರಾಗಿ ರಬ್ಬರ್ ಕೆಲಸಕ್ಕೆ ಹೋಗುವವರಲ್ಲಿ ಭಯ ಆವರಿಸಿದ್ದು ಸುತ್ತಮುತ್ತಲ ಗ್ರಾಮಸ್ಥರು ಆತಂಕಗೊಂಡಿದ್ದಾರೆ.