ಕೊರೋನಾ ಸೋಂಕಿತರ ಮೃತದೇಹ ಸಾಗಿಸಲು 60 ಸಾವಿರ ರೂಪಾಯಿಗೆ ಬೇಡಿಕೆ | ಅಂಬುಲೆನ್ಸ್ ಚಾಲಕ ಅರೆಸ್ಟ್ !
ಸರಿಯಾದ ಸಮಯಕ್ಕೆ ಐಸಿಯು ಬೆಡ್ ಸಿಗದೆ ಮೃತಪಟ್ಟ ಕೊರೋನಾ ಸೋಂಕಿತರೊಬ್ಬರ ಮೃತದೇಹ ಸಾಗಿಸಲು ರೂ.60 ಸಾವಿರ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆ್ಯಂಬುಲೆನ್ಸ್ ಚಾಲಕನನ್ನು ಬಂಧಿಸಿದ್ದಾರೆ.
ಏಪ್ರಿಲ್ 20 ರಂದು ಭವ್ಯಾ (29) ಎಂಬ ಮಹಿಳೆಯ ತಂದೆ ಪ್ರಸಾದ್ ಎಂಬುವವರು ಕೊರೋನಾ ಸೋಂಕಿನಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ತಮ್ಮತಂದೆಯ ಮೃತದೇಹವನ್ನು ಚಿತಾಗಾರಕ್ಕೆ ಸಾಗಿಸಲು ಮುಂದಾದ ಭವ್ಯಾ ಅವರ ಬಳಿ ಆ್ಯಂಬುಲೆನ್ಸ್ ಮಾಲೀಕ ಒಂದೆರಡಲ್ಲ 60 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದಾನೆ. ದುಡ್ಡು ಕೊಟ್ಟರಷ್ಟೇ ಮೃತದೇಹ ಸಾಗಿಸುತ್ತೇವೆ. ಇಲ್ಲವಾದರೆ, ರಸ್ತೆಯ ಮೇಲೆ ಮೃತದೇಹವನ್ನು ಎಸೆದು ಹೋಗುತ್ತೇವೆಂದು ಹೆದರಿಸಿದ್ದಾನೆ.
ಆ ವೇಳೆ ಭವ್ಯಾ ಬಳಿ ಅಷ್ಟೊಂದು ಹಣವಿರಲಿಲ್ಲ.
ತಾನು ತಾಳಿ ಮಾರಿ ಹಣ ನೀಡುತ್ತೇನೆ ಆಮೇಲೆ ಹಣ ನೀಡುತ್ತೇನೆ ಎಂದಿದ್ದಾರೆ. ಈಗ ಮೃತದೇಹ ಸಾಗಿಸಲು ಸಹಾಯ ಮಾಡುವಂತೆ ಬೇಡಿಕೊಂಡಿದ್ದಾರೆ. ಆದರೆ, ಇದಕ್ಕೆ ಆ್ಯಂಬುಲೆನ್ಸ್ ಮಾಲೀಕ ಒಪ್ಪಿಲ್ಲ.
ಬಳಿಕ ಭವ್ಯಾ ಅವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಆ್ಯಂಬುಲೆನ್ಸ್ ಮಾಲೀಕ 16,000 ಕ್ಕೆ ಮಾತುಕತೆ ನಡೆಸಿ ಬಳಿಕ ಮೃತದೇಹ ಸಾಗಿಸಲು ಒಪ್ಪಿದ್ದಾನೆ. ಬಳಿಕ ಭವ್ಯಾ ಅವರು ಹಣವನ್ನು ನೀಡಿ ಮೃತದೇಹವನ್ನು ಸಾಗಿಸಿದ್ದಾರೆ.
ನಂತರ ಹಿರಿಯ ಪೊಲೀಸ್ ಅಧಿಕಾರಿಗಳ ನಡುವೆ ಈ ವಿಷಯ ಚರ್ಚೆಗೆ ಬಂದಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅಮೃತಹಳ್ಳಿ ಪೊಲೀಸರು ಆ್ಯಂಬುಲೆನ್ಸ್ ವಶಕ್ಕೆ ಪಡೆದುಕೊಂಡು ಅದರ ಮಾಲೀಕನನ್ನು ಬಂಧಿಸಿದ್ದಾರೆ.