ಜೀವ ಕಾಪಾಡುವ ಆಂಬುಲೆನ್ಸ್ ನಲ್ಲಿ ಕಣ್ಣು ಬಿಟ್ಟ ಪುಟಾಣಿ ಜೀವ | ಸಂಭ್ರಮದಲ್ಲಿ ವೀರಕೇಸರಿ ತಂಡ
ವೀರಕೇಸರಿ. ಕೇವಲ ನೋವಿನಲ್ಲಿರುವ ಸೇವೆಗೆಂದೇ ಹುಟ್ಟಿಕೊಂಡಿರುವ ಸಂಸ್ಥೆ. ಈ ವೀರಕೇಸರಿ, ಬಳಂಜ ವಿಭಾಗದಲ್ಲಿ ಜನ ಸೇವೆಗೆಂದು ಒಂದು ಅಂಬುಲೆನ್ಸ್ ಸರ್ವಿಸ್ ಇದೆ. ಇದರಲ್ಲಿ ಮೊನ್ನೆ ಒಂದು ವಿಶೇಷ ಘಟನೆ ನಡೆದಿದೆ.
ಇಷ್ಟು ದಿನ ಅವಘಡಗಳು ಸಂಭವಿಸಿದಾಗ ಮತ್ತು ಅಸೌಖ್ಯದಿಂದ ಜನರು ಆಸ್ಪತ್ರೆ ಸೇರುವಾಗ ಸಹಾಯಕ್ಕೆ ಧಾವಿಸುತ್ತಿತ್ತು ಈ ವೀರಕೇಸರಿ ಅಂಬುಲೆನ್ಸ್. ಆದರೆ ಮೊನ್ನೆ ಜೀವ ಉಳಿಸಲು ಧಾವಿಸುವ ಅಂಬುಲೆನ್ಸ್ ನಲ್ಲಿ ಒಂದು ಪುಟಾಣಿ ಜೀವ ಕಣ್ಣುಬಿಟ್ಟಿದೆ.
ಅದೆಷ್ಟೋ ಜೀವಗಳನ್ನ ಕಾಪಾಡಿದ ವೀರಕೇಸರಿ ಆಂಬುಲೆನ್ಸ್ ನಲ್ಲಿ ಮಹಿಳೆಯೊಬ್ಬರು ಆಸ್ಪತ್ರೆಗೆ ಧಾವಿಸುವ ಮಧ್ಯೆಯೇ ಮಗುವಿಗೆ ಜನ್ಮ ನೀಡಿದ್ದಾರೆ. ಇಂತಹ ಪುಣ್ಯ ಕೊಡುಗೆ ಅರ್ಪಣೆಯಾಗಿದ್ದು ನಿಜಕ್ಕೂ ಹೆಮ್ಮೆಯ ವಿಚಾರ ಎಂದು ವೀರಕೇಸರಿ ತಂಡ ಹೇಳಿಕೊಂಡಿದೆ.
” ವೀರಕೇಸರಿ ಬಳಂಜದ ಆಂಬುಲೆನ್ಸ್ ಅದೆಷ್ಟೋ ಜೀವಗಳನ್ನ ಇದುವರೆಗೆ ಕಾಪಾಡಿದೆ. ಆದರೆ ಮೊದಲ ಬಾರಿ ನಮ್ಮ ವೀರ ಕೇಸರಿ ಆಂಬುಲೆನ್ಸ್ ನಲ್ಲಿ ಒಂದು ವಿಶೇಷ ಸಂಗತಿ ನಡೆಯಿತು. ತಾಲೂಕಿನ ಗ್ರಾಮವೊಂದರಿಂದ ಗರ್ಭಿಣಿಯನ್ನು ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಮಯದಲ್ಲಿ ಆ ತಾಯಿ ವೀರಕೇಸರಿ ಆಂಬುಲೆನ್ಸ್ ನಲ್ಲಿಯೇ ಮಗುವಿಗೆ ಜನ್ಮನೀಡಿದ್ದಾರೆ. ಇದೇ ಮೊದಲ ಬಾರಿ ಇಂತಹ ಸಂಗತಿ ನಡೆದದ್ದು. ಒಂದು ಲೆಕ್ಕದಲ್ಲಿ ಹೇಳಬೇಕಂದರೆ ಇದು ವಿಶೇಷ ಸಂಗತಿಯೇ. ತಾಯಿ ಮಗು ಆರೋಗ್ಯವಾಗಿದ್ದಾರೆ.”
“ಅದೆಷ್ಟೋ ಜೀವಗಳನ್ನ ಕಾಪಾಡಿದ ನಮ್ಮ ವೀರಕೇಸರಿ ಆಂಬುಲೆನ್ಸ್ ನಲ್ಲಿ ಇಂತಹ ಪುಣ್ಯ ಕೊಡುಗೆ ಅರ್ಪಣೆಯಾಗಿದ್ದು ನಿಜಕ್ಕೂ ಹೆಮ್ಮೆಯ ವಿಚಾರ.” ಎಂದಿದ್ದಾರೆ ಅಂಬುಲೆನ್ಸ್ ಚಾಲಕ ಪದ್ಮನಾಭ ಅವರು.
ಇವತ್ತು ಅಂಬುಲೆನ್ಸ್ ಸೇವೆ ಎಂಬುದು ತೀರಾ ಅಗತ್ಯವಾದ ಮತ್ತು ಅನಿವಾರ್ಯವಾದ ಸೇವೆ. ಇಂದಿನ ‘ಬ್ಯುಸಿ ‘ ದಿನಗಳಲ್ಲಿ ತಕ್ಷಣಕ್ಕೆ ವೈದ್ಯಕೀಯ ಸೇವೆಯನ್ನು ಹೊಂದಲು ಪಡೆಯಲು ಅಂಬುಲೆನ್ಸ್ ಅನ್ನು ಅವಲಂಬಿಸಬೇಕಾಗಿದೆ. ತಕ್ಷಣಕ್ಕೆ ಕರೆದ ಕೂಡಲೇ ಬರುವ ಅಂಬುಲೆನ್ಸ್ ಮತ್ತು ಅದರ ಚಾಲಕರೆಂದರೆ ವೈದ್ಯರಷ್ಟೇ ಗೌರವ ಎಲ್ಲರಿಗೂ ಇದೆ. ಆದರೆ ದುರದೃಷ್ಟವಶಾತ್ ಈ ಅನಿವಾರ್ಯ ಸೇವೆಯನ್ನೇ ದುಡ್ಡು ಮಾಡಲು ಕೆಲವು ‘ ವೃತ್ತಿ ಪರ ‘ ಅಂಬುಲೆನ್ಸ್ ಹೊಂದಿರುವವರು ಮಾಡುತ್ತಿದ್ದಾರೆ. ಅವರೆಲ್ಲರಿಗಿಂತ ಭಿನ್ನವಾಗಿ,” ಅಂಬುಲೆನ್ಸ್ ನಲ್ಲಿ ಮಗು ಜನ್ಮತಾಳಿದ್ದನ್ನು ಒಂದು ನ್ಯೂಸ್ ಮಾಡೋಣ” ಎಂದು ನಾವು ಹೇಳಿದರೂ, ” ದಾಲ ಬೋರ್ಚಿ ಅಣ್ಣಾ” ಎಂದು ಪ್ರಚಾರದಿಂದ ದೂರ ಉಳಿಯುವ ವೀರಕೇಸರಿ ಅಂಬುಲೆನ್ಸ್ ಸರ್ವಿಸ್ ಒಂದು ಕಡೆ ಮಾದರಿಯಾಗಿ ನಿಂತಿದೆ.
ಮತ್ತೊಂದು ಕಡೆ, ಟಿಪ್ ಟಾಪ್ ಇನ್ ಶರ್ಟ್ ಮಾಡಿಕೊಂಡು, ದುಬಾರಿ ಸೆಂಟ್ ಹಾಕಿಕೊಂಡ ಕೆಲವರು ಬೆಳ್ತಂಗಡಿ ತಾಲೂಕಿನಲ್ಲಿ ಅಂಬುಲೆನ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದಾರೆ. ಅವರ ಅಂಬುಲೆನ್ಸ್ ನಲ್ಲಿ ಹೆಣ ಸಾಗಿಸಿದರೆ, ದುಬಾರಿ ಮೊತ್ತ ಪಡೆಯುವುದಲ್ಲದೆ ಮೆಡಿಕಲ್ ನಿಂದ ಎರಡು-ಮೂರು ದುಬಾರಿ ಬೆಲೆಯ ಪರ್ಫ್ಯೂಮ್ ತರಲು ಆಜ್ಞೆ ಆಗುತ್ತದೆ. ಕುಟುಂಬದ ವ್ಯಕ್ತಿ ಸತ್ತ ನೋವಿನಲ್ಲಿರುವ ಜನ, ಇದು ಯಾವುದನ್ನೂ ಯೋಚಿಸುವ ಸ್ಥಿತಿಯಲ್ಲಿ ಇರೋದಿಲ್ಲವಾದ ಕಾರಣ ಎಲ್ಲ ಸೆಟಲ್ ಮಾಡಿ ಹೋಗುತ್ತಾರೆ.
ಇವರೆಲ್ಲರಿಗಿಂತ ಭಿನ್ನವಾಗಿ ಯೋಚಿಸುತ್ತಾ, ಹೇಳಿದಂತೆ ನಡೆಯುತ್ತಾ ಸೈಲೆಂಟಾಗಿ ಜನ ಸೇವೆಯಲ್ಲಿ ತೊಡಗಿದವರ ಬಗ್ಗೆ ಒಂದು ಒಳ್ಳೆಯ ಮಾತು ಬರೆಯದಿದ್ದರೆ ಪೆನ್ನಿದ್ದೂ ಏನು ಉಪಯೋಗ ?!