ರೈಲು ಬರುತ್ತಿರುವಾಗ ಆಯತಪ್ಪಿ ಟ್ರಾಕ್ ಗೆ ಬಿದ್ದ ಮಗು | ರೋಮಾಂಚಕಾರಿ ವಿಡಿಯೋದ ಒಳಗಿದ್ದಾನೆ ಒಬ್ಬ ರಿಯಲ್ ಹೀರೋ !

ರೈಲ್ವೆ ಸಿಬ್ಬಂದಿಯೊಬ್ಬರು ತನ್ನ ಪ್ರಾಣ ಪಣಕ್ಕಿಟ್ಟು ರೈಲು ಬರುತ್ತಿದ್ದ ವೇಳೆಯೇ ಆಯತಪ್ಪಿ ಹಳಿ ಮೇಲೆ ಬಿದ್ದ ಮಗುವನ್ನು ರಕ್ಷಿಸಿದ ಘಟನೆ ಮುಂಬೈ ವಿಭಾಗದ ರೈಲ್ವೆ ನಿಲ್ದಾಣವೊಂದರಲ್ಲಿ ನಡೆದಿದೆ. ಎಲ್ಲ ಘಟನೆಯೂ ಕಣ್ಣು ಮುಚ್ಚಿ ತೆರೆಯುವುದರೊಳಗೆ ಆಗಿ ಘಟಿಸಿ ಹೋಗಿದೆ.

ಮುಂಬೈನ ವಂಗಾನಿ ರೈಲು ನಿಲ್ದಾಣದಲ್ಲಿ ನಡೆದ ಈ ಭಯಾನಕ ಘಟನೆ ಮತ್ತು ಆಗ ಅಲ್ಲಿನ ಸಿಬ್ಬಂದಿ ಒಬ್ಬ ತೋರಿದ ಸಾಹಸ ವಿಡಿಯೋ ಇದೀಗ ವೈರಲ್ ಆಗಿದ್ದು ಅದೀಗ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಗಮನ ಸೆಳೆದಿದೆ.

ಪಾಪ, ಆ ಮಗುವಿನ ಅಮ್ಮ ಅಂಧ ಮಹಿಳೆಯಾಗಿದ್ದಳು. ಅಮ್ಮ ಮತ್ತು ಮಗು ಫ್ಲಾಟ್ ಫಾರ್ಮ್‌ನಲ್ಲಿ ನಡೆದುಕೊಂಡು ಹೋಗುವ ವೇಳೆ ಮಗು ಆಯತಪ್ಪಿ ರೈಲು ಟ್ರಾಕ್ ಗೆ ಬಿದ್ದುಬಿಟ್ಟಿದೆ. ದುರದೃಷ್ಟವಶಾತ್ ರೈಲು ಧುಮುಗುಡುತ್ತ ಬಂದೇ ಬಿಟ್ಟಿದೆ.
ಅಂಧ ಅಮ್ಮ ಏನೂ ಮಾಡಲಾಗದೆ, ಇನ್ನೇನು ರೈಲು ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ ಅಲ್ಲಿನ ರೈಲ್ವೆ ಸಿಬ್ಬಂದಿ ಒಬ್ಬಾತ ಕ್ಷಿಪ್ರ ಓಟದ ಚಿರತೆಯಂತೆ ಓಡಿ ಬಂದಿದ್ದಾನೆ.

ಆತ ದೇವರಂತೆ ಬಂದು ಮಗುವನ್ನೆತ್ತಿ ಪ್ಲಾಟ್ ಫಾರ್ಮ್ ನ ಮೇಲಕ್ಕೆ ಬಿಸಾಕಿ, ನಂತರ ತಾನೂ ಮೇಲಕ್ಕೆ ಚಿಮ್ಮಿದ್ದಾನೆ. ಪ್ರಾಣ ಪಣಕ್ಕಿಟ್ಟು ಮಗುವಿನ ಜೀವ
ಉಳಿಸಿದ್ದಾನೆ.

ಆತ ಮುಂಬೈನ ಮಯೂರ್ ಶೆಲ್ಖೆ. ಆತನ ಸಾಹಸ ಕಾರ್ಯಕ್ಕೆ ಈಗ ಇಡೀ ದೇಶ ಆತನನ್ನು ನೆನಪಿಸಿಕೊಳ್ಳುತ್ತಿದೆ.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ರೈಲ್ವೆ, ವಂಗಾನಿ ರೈಲ್ವೆ ಸ್ಟೇಷನ್‌ನ ಫ್ಲಾಟ್‌ಫಾರ್ಮ್‌ ನಂಬರ್ 2ರಲ್ಲಿ ತನ್ನ ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಮಗುವೊಂದು ಸಮತೋಲನ ಕಳೆದುಕೊಂಡು ರೈಲ್ವೆ ಹಳಿ ಮೇಲೆ ಬಿದ್ದಿದೆ. ಆಗ ಮುಂಬೈ ವಿಭಾಗದ ಮಯೂರ್ ಶೆಲ್ಖೆ ಅವರು ಮಗುವನ್ನು ರಕ್ಷಿಸುವ ಮೂಲಕ ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದೆ. ಅಲ್ಲದೆ ಘಟನೆಯ ವಿಡಿಯೊವನ್ನು ಹಂಚಿಕೊಂಡಿದೆ.

ಧೈರ್ಯಶಾಲಿ ಕಾರ್ಯವನ್ನು ಮಾಡಿದ ಮುಂಬೈನ ವಂಗಾನಿ ರೈಲ್ವೆ ನಿಲ್ದಾಣದ ರೈಲ್ವೆಮ್ಯಾನ್ ಮಯೂರ್ ಶೆಲ್ಖೆ ಅವರ ಬಗ್ಗೆ ತುಂಬಾ ಹೆಮ್ಮೆಯಾಗುತ್ತಿದೆ. ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ ಮತ್ತು ಮಗುವಿನ ಜೀವ ಉಳಿಸಿದ್ದಾರೆ ಎಂದು ಪಿಯೂಷ್ ಗೋಯಲ್ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

Leave A Reply

Your email address will not be published.