ಪ್ರೈವೇಟ್ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ದರ ನಿಗದಿ | ರಾಜ್ಯ ಸರ್ಕಾರದಿಂದ ದರ ಪಟ್ಟಿ ಪ್ರಕಟ
ರಾಜ್ಯದಲ್ಲಿ ಮತ್ತು ಇಡೀ ದೇಶದಲ್ಲಿ ಕೋರೋನಾ ಅಬ್ಬರ
ಜೋರಾಗಿದೆ. ಕೊರೋನಾ 2ನೇ ಅಲೆಯ ಅಬ್ಬರದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕೊರೋನಾ ಹೊಸ ಪ್ರಕರಣಗಳ ಸಂಖ್ಯೆ ಕೂಡ ಏರಿಕೆಯಾಗಿದೆ. ಹೀಗಾಗಿ ಕೊರೋನಾ ಸೋಂಕಿತರು ಚಿಕಿತ್ಸೆಗಾಗಿ ಪರದಾಡುವಂತ ಪರಿಸ್ಥಿತಿ, ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಚಿಕಿತ್ಸಾ ದರ ವಸೂಲಿಯಂತ ಸಮಸ್ಯೆ ಎದುರಿಸುವಂತಾಗಿದೆ.
ಇದನ್ನು ಮನಗಂಡ ಕರ್ನಾಟಕದ ರಾಜ್ಯ ಸರ್ಕಾರ ಇದಕ್ಕೆ ಬ್ರೇಕ್ ಹಾಕಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ದರವನ್ನು ಫಿಕ್ಸ್ ಮಾಡಿದೆ. ರಾಜ್ಯ ಸರ್ಕಾರ ನಿಗದಿ ಪಡಿಸಿರುವಂತ ದರದಂತೆ ಚಿಕಿತ್ಸಾ ವೆಚ್ಚ ಪಡೆಯುವಂತೆಯೂ ಸೂಚಿಸಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಕಳೆದ ಜೂನ್ ನಲ್ಲಿ ಹೊರಡಿಸಿದ್ದ ಆದೇಶವನ್ನು ಮರು ಜಾರಿಗೊಳಿಸಿದ್ದು, ಸರ್ಕಾರದಿಂದ ಖಾಸಗಿ ಆಸ್ಪತ್ರೆಗೆ ಶಿಫಾರಸು ಆಗಿರುವ ರೋಗಿಗಳಿಗೆ ದಿನಕ್ಕೆ ಗರಿಷ್ಠ 10 ಸಾವಿರ ರೂ.ಚಿಕಿತ್ಸಾ ದರ ನಿಗದಿ ಮಾಡಿದೆ. ಈ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.
ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವವರಿಗೆ ದಿನಕ್ಕೆ ಗರಿಷ್ಠ 25 ಸಾವಿರ ರೂ. ಚಿಕಿತ್ಸೆ ವೆಚ್ಚ ನಿಗದಿಪಡಿಸಲಾಗಿದೆ. ಈ ಹಿಂದಿನ ಆದೇಶಕ್ಕೂ ಹೊಸ ಆದೇಶದಕ್ಕೂ ಚಿಕಿತ್ಸಾ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಖಾಸಗಿ ಆಸ್ಪತ್ರೆಯಲ್ಲಿ ಜನರಲ್ ವಾರ್ಡ್ ಗೆ ಪ್ರತಿದಿನ 5,200 ರೂ., ಆಮ್ಲಜನಕ ವ್ಯವಸ್ಥೆಯುಳ್ಳ ವಾರ್ಡ್ ಗೆ ಪ್ರತಿದಿನ 7 ಸಾವಿರ ರೂ., ತೀವ್ರ ನಿಗಾ ವಿಭಾಗದ ವಾರ್ಡ್ ಗೆ 8,500 ರೂ., ಐಸಿಯು ಜೊತೆಗೆ ವೆಂಟಿಲೇಟರ್ ವಾರ್ಡ್ ಗೆ 10 ಸಾವಿರ ರೂ. ನಿಗದಿ ಮಾಡಲಾಗಿದೆ.
ನೇರವಾಗಿ ಖಾಸಗಿ ಆಸ್ಪತ್ರೆಗೆ ತೆರಳಿದವರಿಗೆ ಹಾಗೆಯೇ ನಗದು ಅಥವಾ ವಿಮಾ ಯೋಜನೆ ಹೊಂದಿರುವವರಿಗೆ ಜನರಲ್ ವಾರ್ಡ್ ಗೆ 10 ಸಾವಿರ ರೂ., ಆಕ್ಸಿಜನ್ ವ್ಯವಸ್ಥೆಯುಳ್ಳ ವಾರ್ಡ್ 12 ಸಾವಿರ ರೂ., ಐಸಿಯು ವಾರ್ಡ ಗೆ 15 ಸಾವಿರ ರೂ., ಐಸಿಯು ಮತ್ತು ವೆಂಟಿಲೇಟರ್ ಹೊಂದಿರುವ ವಾರ್ಡ್ ಗೆ 25 ಸಾವಿರ ರೂ.ಗಳನ್ನು ಸರ್ಕಾರ ನಿಗದಿ ಪಡಿಸಲಾಗಿದೆ.