ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋರೋನಾ ಸೋಂಕಿತರಿಗೆ ಮತ್ತೆ ಸೀಲಿಂಗ್ ಸಿಸ್ಟಮ್ | ನಮ್ಮಲ್ಲಿ ಯಾವಾಗ ಸೀಲಿಂಗ್ ತರ್ತೀರಿ ?!
ಕೊರೋನಾ ಹರಡುವಿಕೆಗೆ ಕಡಿವಾಣ ಹಾಕಲು ಮತ್ತು ಕೊರೋನಾ ಸೊಂಕಿತರನ್ನು ಸುಲಭವಾಗಿ ಗುರುತಿಸಲು ಮುಂದಾಗಿರುವ ಬಿಬಿಎಂಪಿ ಅಧಿಕಾರಿಗಳು, ಕೋವಿಡ್ ಸೋಂಕು ದೃಢಪಟ್ಟಿರುವವರ ಕೈಗಳಿಗೆ, ಇಂದಿನಿಂದಲೇ (ಶನಿವಾರದಿಂದಲೇ) ಅಳಿಸಲಾಗದ ಶಾಯಿಯಿಂದ ‘ ಕೋವಿಡ್ ದೃಢಪಟ್ಟಿದೆ’ ಎಂಬ ಸೀಲ್ ನ್ನು ಹಾಕಲು ನಿರ್ಧರಿಸಿದೆ.
ನಿನ್ನೆ ಈ ವಿಷಯವನ್ನು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಬಿಬಿಎಂಪಿ ಎಂಟು ವಲಯ ಮಟ್ಟದಲ್ಲಿ ಕೋವಿಡ್ ಸೋಂಕು ದೃಢಪಟ್ಟವರಿಗೆ ಸೀಲ್ ಹಾಕುವ ವ್ಯವಸ್ಥೆ ಕುರಿತು ವರ್ಚುಯಲ್ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಉಲ್ಬಣಗೊಳ್ಳುತ್ತಿದೆ. ಆದ್ದರಿಂದ ಕೋವಿದ್ ಸೋಂಕು ದೃಢಪಟ್ಟವರಿಗೆ ಶನಿವಾರ ಕೈಗಳಿಗೆ ಸೀಲ್ ಹಾಕುವ ಕಾರ್ಯ ಪ್ರಾರoಭಿಸಬೇಕು. ಈ ಕುರಿತು ಎಲ್ಲಾ ವಲಯಗಳಲ್ಲಿಯೂ ಕೂಡಲೇ ಕ್ರಮ ಕೈಗೊಳ್ಳಬೇಕು ಅದಕ್ಕೆ ಬೇಕಾದ ಇಂಕ್ ಅನ್ನು ಎಲ್ಲಾ ವಲಯಗಳಿಗೂ ಈ ಕೂಡಲೇ ವ್ಯವಸ್ಥೆ ಮಾಡಬೇಕು ಎಂದು ಮುಖ್ಯ ಆರೋಗ್ಯಾಧಿಕಾರಿ ವಿಜೇಂದ್ರಗೆ ಅವರು ಸೂಚನೆ ನೀಡಿದ್ದಾರೆ. ಸೋಂಕು ಕಂಡು ಬಂದು ಮನೆಯಲ್ಲೇ ಐಸೋಲೇಟ್ ಆಗಿರುವವರು ಹೊರಗೆ ಸಂಚರಿಸದಂತೆ ಮುದ್ರೆ ಹಾಕಬೇಕು. ಒಂದು ವೇಳೆ ಮುದ್ರೆ ಹಾಕಿಸಿಕೊಂಡವರು ತಿರುಗಾಡುವುದನ್ನು ಕಂಡರೆ ಮಾರ್ಷಲ್ ಗಳು, ಪೊಲೀಸರು, ಗೃಹ ರಕ್ಷಕರು, ಸಾರ್ವಜನಿಕರು ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಜಾಗೃತಿ ಮೂಡಿಸಬೇಕೆಂದು ಸೂಚಿಸಿದರು.
ಈ ರೀತಿಯ ಸೀಲಿಂಗ್ ಸಿಸ್ಟಮ್ ಎಲ್ಲಾ ಕಡೆಯೂ ಬಂದರೆ, ಕೊರೋನಾ ಸೊಂಕಿತರ ಪ್ರಯಾಣ ಮತ್ತು ಮೂವ್ ಮೆಂಟ್ ನಲ್ಲಿ ಸಾಕಷ್ಟು ನಿಯಂತ್ರಣ ಸಾಧ್ಯ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ. ನಮ್ಮ ಊರಿನಲ್ಲಿ ಕೂಡ ಈ ರೀತಿ ಸೀಲ್ ಹಾಕುವ ವ್ಯವಸ್ಥೆ ಬರಬೇಕೆಂದು ಒತ್ತಾಯ ಕೇಳಿಬಂದಿದೆ.