ಪೊಲೀಸರನ್ನು ನೋಡಿಕೊಂಡು ಹೂಸು ಬಿಟ್ಟ ವ್ಯಕ್ತಿಯ ಮೇಲೆ ಬಿತ್ತು ಕೇಸು | ಮುಂದೇನಾಯಿತು ಗೊತ್ತಾ ?!

ಕಳೆದ ವರ್ಷ ಪೊಲೀಸರ ಮೇಲೆ ‘ಪ್ರಚೋದನಕಾರಿಯಾಗಿ ಹೂಸು ಬಿಡುವ ಮೂಲಕ’ ಸಾರ್ವಜನಿಕ ಸಭ್ಯತೆಯನ್ನು ಮರೆತಿದ್ದಕ್ಕೆ ವ್ಯಕ್ತಿಯ ಮೇಲೆ ವಿಯೆನ್ನಾದಲ್ಲಿ ದಂಡ ವಿಧಿಸಲಾಗಿತ್ತು.

ಜೋರಾಗಿ ಹೂಸು ಬಿಟ್ಟಿದ್ದಕ್ಕೆ ಆಸ್ಟ್ರಿಯಾದ ಈ ವ್ಯಕ್ತಿಗೆ 500 ಯುರೋಗಳಷ್ಟು ಅಂದರೆ ಸುಮಾರು 44,000 ರೂ. ದಂಡವನ್ನು ವಿಧಿಸಲಾಗಿತ್ತು. ಈ ವಿಷಯವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ ನಂತರ ಈಗ ದಂಡವನ್ನು 100 ಯುರೋಗಳಿಗೆ ಅಂದರೆ ಸುಮಾರು 9 ಸಾವಿರ ದಂಡ ರೂ. ಗೆ ಕಡಿಮೆ ಮಾಡಿದ್ದಾರೆ.

ಏನಿದು ಪೂಕಿಯ ಕಥೆ ?!

ಉದ್ಯಾನವನದ ಬೆಂಚ್‌ನಿಂದ ಎದ್ದು, ಪೊಲೀಸ್‌ ಅಧಿಕಾರಿಗಳನ್ನು ನೋಡುತ್ತಾ ಉದ್ದೇಶಪೂರ್ವಕವಾಗಿಯೇ ಹೆಚ್ಚು ಶಬ್ದ ಬರುವಂತೆ ಕಂಪ್ರೆಸ್ ಮಾಡಿಬಿಟ್ಟು ಹೂಸು ಬಿಟ್ಟಿದ್ದಾನೆ. ಹಾಗೂ ಪೊಲೀಸರು ಇದನ್ನು ಪ್ರಶ್ನಿಸಿ ನೀನು ಯಾರೆಂದು ಕೇಳಿದಾಗ ಆ ವ್ಯಕ್ತಿ ‘ಪ್ರಚೋದನಕಾರಿ ಮತ್ತು ಸಹಕಾರವಿಲ್ಲದೆ’ ವರ್ತಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು. ಅದರಂತೆ ಆತನಿಗೆ ದುಬಾರಿ ದಂಡ ವಿಧಿಸಿದ್ದರು.
‘ ಇದೇನು ಅರಿವಿಲ್ಲದೇ ಹೋಗುವಂತಹ ಹೂಸು ಗೆ ಇಷ್ಟು ದೊಡ್ಡ ಮಟ್ಟದ ದಂಡವೆ? ಎಂದು ಆತ ಪೊಲೀಸರ ದಂಡ ಪ್ರಯೋಗವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾನೆ. ಹಾಗಾಗಿ ಹೂಸು ಕೇಸು ಕೋರ್ಟ್ ಮೆಟ್ಟಲೇರಿದೆ.

ನ್ಯಾಯಾಲಯದಲ್ಲಿ ಆ ವ್ಯಕ್ತಿಯು ತನಗೆ ವಿಧಿಸಲ್ಪಟ್ಟ ಭಾರಿ ಮೊತ್ತದ ವಿರುದ್ಧ ಸ್ವತಹ ವಾದ ಹೂಡಿದ್ದು, ಆ ಘಟನೆ ಒಂದು ‘ಜೈವಿಕ ಪ್ರಕ್ರಿಯೆ’ ಎಂದು ಹೇಳಿದ್ದಾನೆ. ಅಲ್ಲದೆ, “ಉದ್ದೇಶಪೂರ್ವಕವಾಗಿ” ಮಾಡಿದರೂ ಸಹ ಗಾಳಿಯನ್ನು ಬೀಸುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ನ್ಯಾಯಸಮ್ಮತವೆಂದು ಪರಿಗಣಿಸಬೇಕು ಎಂದು ಹೇಳಿಕೊಂಡಿದ್ದ. ” ಇಲ್ಲಿ ಹೂಸು ಬಿಡದೆ ಇರುವವರು ಯಾರಾದರೂ ಇದ್ದಾರೆಯೇ ?” ಎಂದು ಆತ ತುಂಬಿದ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾನೆ.

ಆಸ್ಟ್ರಿಯಾದಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯವು ಶಬ್ದಗಳು ಮತ್ತು ಸಂವಹನ ಸೇರಿದಂತೆ ವಿವಿಧ ರೂಪಗಳನ್ನು ತೆಗೆದುಕೊಳ್ಳಬಹುದು ಮತ್ತು ಇದು ಕೇವಲ ಮಾತಿಗೆ ಸೀಮಿತವಾಗಿಲ್ಲ. ಹೂಸು ಕೂಡ ಇಂತಹ ಒಂದು ಜೈವಿಕ ಸಂವಾದ ಎಂದು ಆತ ವಾದಿಸಿದ್ದಾನೆ.

ಆದರೂ, ಈ ಸಂವಹನ ವಿಧಾನವು ‘ಸಭ್ಯತೆಯ ಗಡಿಗಳನ್ನು ಮೀರಿದೆ’ ಎಂದಿದೆ ಅಲ್ಲಿನ ನ್ಯಾಯಾಲಯ. ನ್ಯಾಯಾಲಯವು ಆ ವ್ಯಕ್ತಿಯ ಕ್ರಮವನ್ನು ‘ ಹಾಸ್ಯದ ವಿಷಯ’ ಎಂದು ಪರಿಗಣಿಸಿದೆ. ಅದಕ್ಕಾಗಿ ಆತನ ಅಪರಾಧದ ಪ್ರಮಾಣವನ್ನು ಕನಿಷ್ಠ ಎಂದು ಪರಿಗಣಿಸಿದ ನ್ಯಾಯಾಲಯವು ದಂಡವನ್ನು ಕಡಿಮೆ ಮಾಡಿದೆ. ಇದು ಆತನ ಮೊದಲ ಅಪರಾಧ ಎಂದೂ ಕೋರ್ಟ್ ಹೇಳಿದೆ. ಆದರೆ ಅದು ಮೊದಲ ಕೂಸು ಆಗಿರುವುದಕ್ಕೆ ಸಾಧ್ಯವಿಲ್ಲ!

Leave A Reply

Your email address will not be published.