ಬೆಳ್ತಂಗಡಿ | ಬ್ರಹ್ಮಕಲಶೋತ್ಸವದ ಸ್ವಾಗತ ದ್ವಾರ ನಿರ್ಮಿಸುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಗೊಂಡು ಓರ್ವ ಮೃತ್ಯು
ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ಬಯಲು ಎಂಬಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸ್ವಾಗತ ದ್ವಾರ ನಿರ್ಮಿಸುವ ಸಂದರ್ಭದಲ್ಲಿ ವಿದ್ಯುತ್ ತಗುಲಿ ಓರ್ವ ಯುವಕ ದಾರುಣವಾಗಿ ಮೃತಪಟ್ಟ ಘಟನೆ ನಿನ್ನೆ ರಾತ್ರಿ ನಡೆದಿದೆ.
ನೆರಿಯ ಗ್ರಾಮದ ಅಪ್ಪಿಲ ನಿವಾಸಿ ಸೋಮಪ್ಪ ಗೌಡ ರವರ ಪುತ್ರ ಉಮೇಶ( 38.ವ) ಎಂಬವರೇ ಘಟನೆಯಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಇಲ್ಲಿನ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ನೆರಿಯ ಬಯಲು ಎಂಬಲ್ಲಿ ಯುವಕರ ತಂಡವೊಂದು ಸ್ವಾಗತದ್ವಾರ ನಿರ್ಮಿಸುತ್ತಿದ್ದರು ಎನ್ನಲಾಗಿದೆ. ಅವರು ನಿರ್ಮಿಸುತ್ತಿದ್ದ ದ್ವಾರದ ಮೇಲ್ಗಡೆ ಹೆಚ್ಪಿಸಿಎಲ್ ನೆರಿಯ ಪಂಪ್ ಹೌಸ್ಗೆ ಹಾದು ಹೋದ ಹೈಟೆನ್ಶನ್ ವಿದ್ಯುತ್ ಲೈನ್ ಇತ್ತು.
ದ್ವಾರಕ್ಕೆ ಬಿದಿರು ಅಳವಡಿಸುವ ಸಮಯ ಹೈಟೆನ್ಶನ್ ವಿದ್ಯುತ್ ಲೈನಿಗೆ ಆಕಸ್ಮಿಕವಾಗಿ ತಾಗಿ ವಿದ್ಯುತ್ ಶಾಕ್ ಸಂಭವಿಸಿದೆೆ ಎನ್ನಲಾಗಿದೆ .
ಘಟನೆಯಿಂದ ವಿದ್ಯುತ್ ಪ್ರವಹಿಸಿ ಉಮೇಶರವರು ಗಂಭೀರಗೊಂಡಿದ್ದು, ಇವರನ್ನು ಚಿಕಿತ್ಸೆಗಾಗಿ ಉಜಿರೆಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಇನ್ನೋರ್ವ ಪರ್ಲ ನಿವಾಸಿ ಅಣ್ಣು ಗೌಡರ ಪುತ್ರ ಗಂಗಾಧರ ಎಂಬವರಿಗೆ ಕೂಡ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಶರೀರವನ್ನು ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.