ಲಾಟರಿಯಲ್ಲಿ ಕೋಟಿ ರೂ. ಗೆದ್ದ ಕಥೆ | ತೊಕ್ಕೊಟ್ಟು ವಾಚ್ಮನ್ ಮೊಯ್ದಿನ್ ಕುಟ್ಟಿ ಕಟ್ಟಿ ಆಡಿದ ನಾಟಕ ಬಯಲು
ಮಂಗಳೂರು, ಏಪ್ರಿಲ್ 9: ಸಾಲಗಾರರ ಕಾಟ ತಡೆಯಲಾರದೆ ಲಾಟರಿಯಲ್ಲಿ ಒಂದು ಕೋಟಿ ರೂ. ಗೆದ್ದ ಕೇರಳ ಮೂಲದ ವ್ಯಕ್ತಿ ಇಲ್ಲಿಯವರೆಗೆ ಬಿಟ್ಟದ್ದು ಪುಂಗಿ ಎಂಬ ಸಂಗತಿ ಈಗ ಬಯಲಿಗೆ ಬರುತ್ತಿದೆ. ಆತನ ಸುಳ್ಳಿನ ಕಥೆ ರಾಜ್ಯಮಟ್ಟದ ಪತ್ರಿಕೆಗಳೂ ಸೇರಿದಂತೆ ಎಲ್ಲರನ್ನೂ ಮಂಗ ಮಾಡಿದೆ.
ಮಂಗಳೂರು ನಗರ ಹೊರವಲಯದ ತೊಕ್ಕೊಟ್ಟು ಜಂಕ್ಷನ್ನಿನ ಕಟ್ಟಡದಲ್ಲಿ ಮೂರು ವರ್ಷಗಳಿಂದ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಕೇರಳದ ಕ್ಯಾಲಿಕಟ್ ನಿವಾಸಿ ಮೊಯಿದ್ದೀನ್ ಕುಟ್ಟಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದರು. ಕಾರಣ ಅವರಿಗೆ ಭಾಗ್ಯಲಕ್ಷ್ಮಿ ಲಾಟರಿಯಲ್ಲಿ ಒಂದು ಕೋಟಿ ಸಿಕ್ಕಿದೆ ಎಂಬ ವಿಚಾರಕ್ಕೆ.
ಕಷ್ಟದಲ್ಲಿದ್ದ, ಸಾಲ ಮಾಡಿ ಕೊಂಡ ಲಾಟರಿ ಟಿಕೇಟು ಒಂದು ಕೋಟಿ ಗೆದ್ದು ಕೊಟ್ಟದ್ದು ಸೆನ್ಸೇಷನಲ್ ಸುದ್ದಿಯಾಗಿತ್ತು. ಸುದ್ದಿ ಪಬ್ಲಿಕ್ ಆಗಿ, ಅದನ್ನು ಹಲವಾರು ಪತ್ರಿಕೆಗಳು, ಸುದ್ದಿ ವೆಬ್ಸೈಟ್ಗಳು ಈ ವೈರಲ್ ಸುದ್ದಿಯನ್ನೇ ಯಥಾವತ್ತಾಗಿ ಪ್ರಕಟಿಸಿದ್ದವು.
500 ರೂ. ಸಾಲ ಮಾಡಿ ಲಾಟರಿ ಪಡೆದವನಿಗೆ ಒಲಿದ ಕೋಟಿ ರೂಪಾಯಿ ಅಂತಾ ಸಖತ್ ಪ್ರಚಾರ ಪಡೆದರು. ಇದಕ್ಕೆ ಪುಷ್ಠಿ ನೀಡುವಂತೆ ಮೊಯಿದ್ದೀನ್ ಕುಟ್ಟಿ ಲಾಟರಿ ಹಿಡಿರುವ ಫೋಟೋ, ಲಾಟರಿ ನಂಬರ್ ಎಲ್ಲವೂ ವೈರಲ್ ಆಗಿತ್ತು.’ ಪಾಪ, ಹೇಗಾದರೂ ಆತನ ಕಷ್ಟ ಕಳೆಯಿತಲ್ಲ’ ಎಂದು ಜನರು ಪ್ರೀತಿಯಿಂದಲೇ ಶುಭ ಹಾರೈಸಿದ್ದರು.
ಆದರೆ ಇದೀಗ ಸತ್ಯ ಘಟನೆ ಹೊರ ಬಂದಿದ್ದು, ಇವೆಲ್ಲವೂ ಮೊಯಿದ್ದೀನ್ ಕುಟ್ಟಿ ಕಟ್ಟಿ ಆಡಿರುವ ಡ್ರಾಮಾ ಅಂತಾ ಗೊತ್ತಾಗಿದೆ. ಸಾಲಗಾರರ ಕಾಟ ತಡೆಯಲಾರದೆ ಒಂದು ಕೋಟಿ ಲಾಟರಿ ಹೊಡೆದಿರುವ ಬಗ್ಗೆ ಸ್ವತಃ ಮೊಯಿದ್ದೀನ್ ಪ್ರಚಾರ ಮಾಡಿದ್ದರು. ಇದಕ್ಕೆ ಪ್ರೂಫ್ ಆಗಿ ಆತ ಸೈಬರ್ ಸೆಂಟರಿಗೆ ಹೋಗಿ ಫೇಕ್ ಲಾಟರಿ, ನಂಬರ್ ತಯಾರಿ ಮಾಡಿಕೊಂಡಿದ್ದಾರೆ. ಸಾಲಗಾರರಿಗೆ ಲಾಟರಿ ಹೊಡೆದಿರುವ ಫೋಟೋ ಕಳುಹಿಸಿ ಸಾಲವೆಲ್ಲಾ ಮರುಪಾವತಿ ಮಾಡುವುದಾಗಿ ಹೇಳಿದ್ದಾರೆ. ಬಹುಶಃ ಸ್ವಲ್ಪ ದಿನ ಸಾಲಗಾರ ರಿಂದ ತಪ್ಪಿಸಿ ಕೊಳ್ಳುವ ಪ್ಲಾನ್ ಇದಾಗಿತ್ತೇನೋ. ಅಥವಾ ಮತ್ತಷ್ಟು ಸಾಲ ಎತ್ತಲು ಈ ತಂತ್ರವನ್ನು ಆತ ಬಳಸಿಕೊಂಡ ಎನ್ನಲಾಗುತ್ತಿದೆ. ಲಾಟರಿ ಖರೀದಿಸುವ ಹವ್ಯಾಸ ಹೊಂದಿರುವ ಮೊಯಿದ್ದೀನ್ ಲಾಟರಿ ಒಲಿದಿರಬಹುದೆಂದು ಎಲ್ಲರೂ ನಂಬಿದ್ದಾರೆ. ಆದರೆ ಸೆಕ್ಯೂರಿಟಿ ಗಾರ್ಡ್ ನೋರ್ವನಿಗೆ ಕೋಟಿ ಒಲಿದಿರುವ ವಿಚಾರ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಈ ಮಟ್ಟದ ಪ್ರಚಾರವನ್ನು ಜೀರ್ಣ ಮಾಡಿಕೊಳ್ಳಲಾಗದ ಮೊಯಿದ್ದೀನ್ ಪರಾರಿಯಾಗಿದ್ದಾರೆ.